ಬೆಂಗಳೂರು, ಏ 12: ಉದ್ಯಮಿ ಪುತ್ರ ವಿದ್ವತ್ ಮೇಲೆ ಶಾಸಕರ ಮಗ ಮೊಹಮ್ಮದ್ ನಲಪಾಡ್ ಮಾರಣಾಂತಿಕ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಒಂದೆಡೆ ತನಿಖೆ ಚುರುಕುಗೊಳಿಸಿದ್ರೆ, ಇನ್ನೊಂದೆಡೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ , ನಲಪಾಡ್ ತಂದೆ ಹ್ಯಾರಿಸ್ ಅವರಿಗೆ ಟಿಕಟ್ ನೀಡಬೇಕೋ ಬೇಡವೋ ಎನ್ನುವುದನ್ನು ನಿರ್ಧರಿಸಲಿದ್ದಾರೆ. ಹ್ಯಾರಿಸ್ ಅವರ ಪುತ್ರ ಮೊಹಮದ್ ನಲಪಾಡ್ ಫರ್ಜಿ ಕೆಫೆಯಲ್ಲಿ ನಡೆಸಿದ ಹಲ್ಲೆ ಪ್ರಕರಣವು ಹ್ಯಾರಿಸ್ ರಾಜಕೀಯ ಭವಿಷ್ಯಕ್ಕೆ ಕುತ್ತು ತರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದ್ದು, ಹೀಗಾಗಿ ಹ್ಯಾರಿಸ್ ಅವರ ರಾಜಕೀಯ ಹಣೆಬರಹ ಈಗ ರಾಹುಲ್ ಗಾಂಧಿಯವರ ಕೈಯಲ್ಲಿದೆ.
ಕಾಂಗ್ರೆಸ್ ಸ್ಕ್ರೀನಿಂಗ್ ಕಮಿಟಿ ಶಾಂತಿನಗರ ಶಾಸಕ ಎನ್ ಎ ಹ್ಯಾರಿಸ್ ಅವರಿಗೆ ಟಿಕೆಟ್ ಕೊಡುವಂತೆ ಶಿಪಾರಸು ಮಾಡಿದ್ದು, ಇದೇ ನಿಟ್ಟಿನಲ್ಲಿ ಹ್ಯಾರಿಸ್ ಅವರಿಗೆ ಟಿಕೆಟ್ ನೀಡುವಂತೆ ಅವರ ಬೆಂಬಲಿಗರು ಸಿಎಂ ಸಿದ್ದರಾಮಯ್ಯ ನಿವಾಸದ ಮುಂದೆ ಪ್ರತಿಭಟನೆ ನಡೆಸಿ, ಹ್ಯಾರಿಸ್ ಪರ ಘೋಷಣೆ ಕೂಗಿ ಟಿಕೆಟ್ ನೀಡುವಂತೆ ಒತ್ತಾಯಿಸಿದ್ದಾರೆ. ಅತ್ತಕಡೆ ತನಿಖೆ ಚುರುಕುಗೊಳಿಸಿವ ಸಿಸಿಬಿ ಪೊಲೀಸರು ಹಲ್ಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಚಿಕ್ಕಪೇಟೆ ಶಾಸಕ ಆರ್.ವಿ.ದೇವರಾಜ್ ಪುತ್ರ ಯುವರಾಜ್'ಗೆ ನೋಟಿಸ್ ನೀಡಲು ಸಿಸಿಬಿ ತಯಾರಿ ನಡೆಸಿದೆ.