ಬಂಟ್ವಾಳ, ಜು13 (Daijiworld News/MSP): ಶನಿವಾರ ಬೆಳಗ್ಗಿನಿಂದ ನಾಪತ್ತೆಯಾಗಿದ್ದ ಮೂಡ ಗ್ರಾಮದ ನಿವಾಸಿಯಾಗಿದ್ದ ಮಹಿಳೆ ಮೃತದೇಹ ತುಂಬೆ ಸಮೀಪ ನೇತ್ರಾವತಿ ನದಿಯಲ್ಲಿ ಸೋಮವಾರ ಪತ್ತೆಯಾಗಿದೆ.

ಮೃತ ಮಹಿಳೆಯನ್ನು ಗೋಪಿ ಪೂಜಾರಿ(49) ಎಂದು ಗುರುತಿಸಲಾಗಿದೆ. ಇವರು ಬಿ. ಸಿರೋಡಿನ ಚಿಕ್ಕಯ್ಯಮಠ ಎಂಬಲ್ಲಿ ತನ್ನ ಸಹೋದರಿಯ ಮನೆಗೆ ಕಳೆದ ಕೆಲ ದಿನಗಳ ಹಿಂದೆ ಬಂದಿದ್ದರು. ಜೂ.10 ರ ಶುಕ್ರವಾರ ರಾತ್ರಿ ಊಟ ಮಾಡಿ ಮಲಗಿದ್ದ ಇವರು ಶನಿವಾರ ಮುಂಜಾನೆ ಕಾಣೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಮನೆಯವರು ಹುಡುಕಾಟ ನಡೆಸಿದಾಗ ಪಾಣೆಮಂಗಳೂರು ನೂತನ ಸೇತುವೆ ಬಳಿ ಆಕೆ ಧರಿಸಿದ್ದ ಶಾಲು ಹಾಗೂ ಕೈಯಲ್ಲಿದ್ದ ಬಳೆ ಪತ್ತೆಯಾಗಿತ್ತು. ಈ ಹಿನ್ನಲೆಯಲ್ಲಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಸಂಶಯ ಮನೆಯವರು ವ್ಯಕ್ತಪಡಿಸಿದ್ದರು. ಹೀಗಾಗಿ ಮುಳುಗುತಜ್ಞರು ಹುಡುಕಾಟ ನಡೆಸಿದ್ದರು. ಆದರೆ ಮಹಿಳೆಯ ಬಗ್ಗೆ ಯಾವುದೇ ಸುಳಿವು ದೊರಕಿರಲಿಲ್ಲ.
ಮಹಿಳೆ ಈ ಹಿಂದೆಯೂ ಒಮ್ಮೆ ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದರು ಎಂದು ಹೇಳಲಾಗಿದ್ದು, ಇಂದು ತುಂಬೆ ಸಮೀಪ ನದಿಯಲ್ಲಿ ಶವ ಪತ್ತೆಯಾಗಿದೆ. ಬಂಟ್ವಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.