ಪುತ್ತೂರು, ಏ 12: ಪುತ್ತೂರಿನ ವಿವೇಕನಾಂದ ಕಾಲೇಜಿನ ಕಾನೂನು ಪದವಿ ಕಾಲೇಜಿನ ಕೆಲ ವಿದ್ಯಾರ್ಥಿಗಳ ಗುಂಪೊಂದು ಬೊಳುವಾರು ಸಮೀಪ ರೆಸ್ಟೋರೆಂಟ್ ಒಂದಕ್ಕೆ ಹುಟ್ಟುಹಬ್ಬದ ಆಚರಣೆಗೆಂದು ಹೋಗಿದ್ದಾಗ ಅಲ್ಲಿಗೆ ತೆರಳಿ ಗಲಾಟೆ ಎಬ್ಬಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಭಜರಂಗದಳ ನಾಯಕ ಶ್ರೀಧರ್ ತೆಂಕಿಲ ಅವರನ್ನು ಪುತ್ತೂರು ಪೊಲೀಸರು ಬಂಧಿಸಿದ್ದಾರೆ. ವಿವಿಧ ಧರ್ಮಗಳ ವಿದ್ಯಾರ್ಥಿಗಳು ಹುಟ್ಟುಹಬ್ಬ ಸಮಾರಂಭಕ್ಕೆಂದು ಒಟ್ಟು ಸೇರಿ ಜತೆಯಾಗಿ ಕೇಕ್ ಕತ್ತರಿಸಿತ್ತು. ಈ ಸಂದರ್ಭದಲ್ಲಿ ಅಲ್ಲಿಗೆ ತೆರಳಿದ್ದ ಭಜರಂಗದಳದ ಸುಮಾರು 10 ಮಂದಿ ಕಾರ್ಯಕರ್ತರು ಪಾರ್ಟಿಯಲ್ಲಿ ಹುಡುಗಿಯರ ಜೊತೆಗೆ ಅಲ್ಪಸಂಖ್ಯಾತ ಸಮುದಾಯದ ಹುಡುಗನೊಬ್ಬ ಇದ್ದಾನೆಂದು ಪಾರ್ಟಿ ಮಾಡಬಾರದೆಂದು ಅವಾಜ್ ಹಾಕಿದ್ದರು. ಆದರೆ ಅಲ್ಲಿಗೆ ತೆರಳಿದಾಗ ವಿದ್ಯಾರ್ಥಿಗಳ ಗುಂಪಿನಲ್ಲಿ ಎಲ್ಲಾ ಧರ್ಮದವರಿದ್ದಾರೆ ಎಂದು ತಿಳಿದು ಅವರಿಗೆ ಬೈದು ಹುಟ್ಟುಹಬ್ಬದ ಸಮಾರಂಭ ಆಚರಿಸಿದಂತೆ ಎಚ್ಚರಿಕೆ ನೀಡಿ ಅಲ್ಲಿಂದ ಹೊರಹೋಗಿದ್ದರು.
ಆದರೆ ಬಳಿಕ ಸೆಕ್ಷನ್ 107ರಡಿಯಲ್ಲಿ ಸ್ವಯಂಪ್ರೇರಿತ ಕೇಸು ದಾಖಲಿಸಿಕೊಂಡ ಪೊಲೀಸರು ಅನವಶ್ಯಕವಾಗಿ ಸ್ಥಳಕ್ಕೆ ಹೋಗಿ ದಾಂಧಲೆ ಎಬ್ಬಿಸಿದ್ದಕ್ಕೆ ಭಜರಂಗದಳ ಜಿಲ್ಲಾ ಸಹ ಸಂಚಾಲಕ ಶ್ರೀಧರ್ ತೆಂಕಿಲನನ್ನು ಬಂಧಿಸಿದ್ದಾರೆ. ಉಳಿದವರು ಪರಾರಿಯಾಗಿದ್ದು, ಸದ್ಯದಲ್ಲೇ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.