ಉಡುಪಿ, ಜು.13 (DaijiworldNews/MB) : ''ಜಿಲ್ಲೆಯಲ್ಲಿ ಲಾಕ್ಡೌನ್ ಮಾಡುವ ಬಗ್ಗೆ ಇನ್ನು ತೀರ್ಮಾನವಾಗಿಲ್ಲ. ಮುಖ್ಯಮಂತ್ರಿಗಳೊಂದಿಗೆ ಜಿಲ್ಲಾಧಿಕಾರಿ ವಿಡಿಯೋ ಕಾನ್ಫೆರೆನ್ಸ್ ಬಳಿಕ ಈ ಬಗ್ಗೆ ನಿರ್ಧಾರವಾಗಲಿದೆ. ಜನರು ಆರ್ಥಿಕವಾಗಿ ಈಗಷ್ಟೇ ಚೇತರಿಸುತ್ತಿದ್ದು ಜಿಲ್ಲೆಯಲ್ಲಿ ಈ ಹಂತದಲ್ಲಿ ಲಾಕ್ಡೌನ್ ಮಾಡುವ ಅಗತ್ಯವಿಲ್ಲ ಎಂಬುದು ನನ್ನ ಅಭಿಪ್ರಾಯ'' ಎಂದು ಶಾಸಕ ರಘಪತಿ ಭಟ್ ಅವರು ಹೇಳಿದ್ದಾರೆ.

''ಈಗಾಗಲೇ ಉಸ್ತುವಾರಿ ಸಚಿವರು ಹಾಗೂ ಗೃಹ ಸಚಿವರೂ ಆಗಿರುವ ಬಸವರಾಜು ಬೊಮ್ಮಾಯಿಯವರಿಗೆ ನನ್ನ ಸಲಹೆಯನ್ನು ನೀಡಿದ್ದೇನೆ. ಈ ಹಂತದಲ್ಲಿ ಲಾಕ್ಡೌನ್ ಮಾಡುವುದು ಅಗತ್ಯವಿಲ್ಲ ಎಂಬುದು ನನ್ನ ಅಭಿಪ್ರಾಯ. ನಮ್ಮ ಜಿಲ್ಲೆಯಲ್ಲಿ 1 ಸಾವಿರ ಕೊರೊನಾ ಪ್ರಕರಣಗಳು ದಾಖಲಾಗಿದ್ದರೂ ಕೂಡಾ ಆ ಪೈಕಿ ಹೊರ ಜಿಲ್ಲೆ ಹಾಗೂ ಹೊರ ರಾಜ್ಯದಿಂದ ಬಂದವರೇ ಹೆಚ್ಚಾಗಿದ್ದಾರೆ'' ಎಂದು ಹೇಳಿದ್ದಾರೆ.
''ಬೆಂಗಳೂರಿನಿಂದ ಬಂದವರನ್ನು ಹೋಮ್ ಕ್ವಾರಂಟೈನ್ ಇರಿಸಿ. ಇಲ್ಲಿ ಎಂದಿನಂತೆ ವ್ಯಾಪಾರ ವ್ಯವಹಾರ ನಡೆಸುವುದು ಒಳ್ಳೆಯದು. ಜನರು ಈಗಷ್ಟೇ ಸ್ವಲ್ಪ ಆರ್ಥಿಕವಾಗಿ ಚೇತರಿಸಿಕೊಳ್ಳುತ್ತಿದ್ದು ಈ ಸಂದರ್ಭದಲ್ಲಿ ಮತ್ತೆ ಲಾಕ್ಡೌನ್ ಮಾಡಿದರೆ ಜನರಿಗೆ ಕೊರೊನಾ ಸಮಸ್ಯೆಗಿಂತ ಆರ್ಥಿಕ ಸಮಸ್ಯೆಯೇ ಹೆಚ್ಚಾಗುತ್ತದೆ'' ಎಂದು ಹೇಳಿದ್ದಾರೆ.
''ಜನರಿಗೆ ಸಾಮಾಜಿಕ ಅಂತರ ಹಾಗೂ ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಿ, ನಮ್ಮ ಗಡಿಯನ್ನು ಸೀಲ್ ಮಾಡುವಂತದ್ದು ಮತ್ತೆ ಪ್ರಾರಂಭ ಮಾಡುವುದು ಒಳ್ಳೆಯದು'' ಎಂದು ಸಲಹೆ ನೀಡಿದ್ದಾರೆ.