ಉಡುಪಿ, ಜು.13 (DaijiworldNews/MB) : ಚಲನಚಿತ್ರ ನಿರ್ಮಾಪಕರೊಬ್ಬರು ತನ್ನ ಮನೆಯ ಹೊರಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿ ಜಿಲ್ಲೆ ಕುಂದಾಪುರದಲ್ಲಿ ನಡೆದಿದೆ. ಮೃತ ನಿರ್ಮಾಪಕರನ್ನು ಕುಂದಾಪುರದ ಬೀಜಾಡಿ ನಿವಾಸಿ ನಾಗೇಶ್ ಕುಮಾರ್ (64) ಎಂದು ಗುರುತಿಸಲಾಗಿದೆ.

ನಾಗೇಶ್ ಕುಮಾರ್ ಅವರು ಭೂಮಿಕಾ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಭರತ್ ನಾವುಂದ ನಿರ್ದೇಶನದಲ್ಲಿ ಮೂಡಿ ಬಂದ ಕಿರುಚಿತ್ರವೊಂದರ ನಿರ್ಮಾಣ ಮಾಡಿದ್ದು ಅದಕ್ಕಾಗಿ 28 ಲಕ್ಷ ರೂ.ಗಳನ್ನು ಹೂಡಿಕೆ ಮಾಡಿದ್ದರು. ತನ್ನ ಡೆತ್ನೋಟ್ನಲ್ಲಿ ಅವರು ಈ ಬಗ್ಗೆ ಉಲ್ಲೇಖಿಸಿದ್ದು ನಷ್ಟ ಅನುಭವಿಸಿರುವುದಾಗಿ ಹೇಳಿದ್ದಾರೆ. ಹಾಗೆಯೇ ತನ್ನ ಸಾವಿಗೆ ಯಾರೂ ಕಾರಣರಲ್ಲಿ ಎಂದು ಬರೆದುಕೊಂಡಿದ್ದಾರೆ.
ನಾಗೇಶ್ ಅವರು ನಿವೃತ್ತ ಬ್ಯಾಂಕ್ ಉದ್ಯೋಗಿಯಾಗಿದ್ದು ಚಲನಚಿತ್ರಕ್ಕೆ ಉತ್ತಮವಾದ ಪ್ರತಿಕ್ರಿಯೆ ಸಿಗದ ಹಿನ್ನಲೆ ಆದಾಯವಿಲ್ಲದೆ ನಿರಾಶೆಗೊಂಡಿದ್ದರು. ಇದರಿಂದಾಗಿ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರು. ಅದಕ್ಕಾಗಿ ಕಳೆದ ಒಂದು ವರ್ಷದಿಂದ ಔಷಧ ತೆಗೆದುಕೊಳ್ಳುತ್ತಿದ್ದರು ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವಿನ ಪ್ರಕರಣ ದಾಖಲಾಗಿದೆ.