ಬೆಳ್ತಂಗಡಿ, ಜು13 (Daijiworld News/MSP): ಶಾಲೆಗಳು ಪ್ರಾರಂಭವಾಗದ ಹಿನ್ನಲೆಯಲ್ಲಿ ಮಕ್ಕಳು ಶಿಕ್ಷಣ ವಂಚಿತರಾಗಬಾರದು ಎಂದ ಉದ್ದೇಶವನ್ನಿಟ್ಟುಕೊಂಡು ಮಕ್ಕಳ ಮನೆಗೆ ಶಿಕ್ಷಣ ತಲುಪಿಸಲಿ ಶಾಲಾ ಶಿಕ್ಷಕರು ಪ್ರಯತ್ನಿಸಬೇಕು ಎಂದು ಶಾಸಕ ಹರೀಶ್ ಪೂಂಜಾ ಹೇಳಿದರು.

ಅವರು ಸೋಮವಾರ ಇಲ್ಲಿನ ಮಂಜುನಾಥ ಕಲಾಭವನದಲ್ಲಿ ತಾಲೂಕಿನ ಮುಖ್ಯ ಶಿಕ್ಷಕರುಗಳೊಂದಿಗೆ ಕೊರೋನಾ ಸನ್ನಿವೇಶದಲ್ಲಿ ಮಕ್ಕಳಿಗೆ ಯಾವ ರೀತಿ ಶಿಕ್ಷಣ ಒದಗಿಸಬಹುದು ಎಂಬ ಬಗ್ಗೆ ಸಮಾಲೋಚನಾ ಸಭೆ ನಡೆಸಿದರು. ಸರಕಾರದ ಆದೇಶ ಬರುವವರೆಗೆ ಪ್ರತಿಯೊಂದು ವಿದ್ಯಾರ್ಥಿಗಳನ್ನು ತಲುಪುವ ರೀತಿಯಲ್ಲಿ ಶಿಕ್ಷಕರು ಪ್ರಯತ್ನಿಸಬೇಕು, ಶಾಲೆಗಳಲ್ಲಿ ಅಂತರ ಕಾಯ್ದುಕೊಂಡು ಪೋಷಕರ ಸಭೆಯನ್ನು ನಡೆಸಿ ಮಕ್ಕಳಿಗೆ ಯಾವ ರೀತಿ ಶಿಕ್ಷಣ ನೀಡಲಿದ್ದೇವೆ ಎಂಬ ಬಗ್ಗೆ ಮಾಹಿತಿ ನೀಡಬೇಕು ಮತ್ತು ಪೋಷಕರು ಈ ವ್ಯವಸ್ಥೆಯಲ್ಲಿ ಹೆಚ್ಚು ಸಕ್ರೀಯರಾಗುವಂತೆ ಮನವೊಲಿಸಬೇಕು. ಈಗಾಗಲೇ ಕೆಲವು ಶಿಕ್ಷಕರು ವಾಟ್ಸಾಪ್ ಗ್ರೂಪ್ ,ಎಸ್ಎಂಎಸ್ , ಫೋನ್ ಮೂಲಕ ವಿದ್ಯಾರ್ಥಿಗಳನ್ನು ತಲುಪುವ ಪ್ರಯತ್ನ ಮಾಡಿದ್ದಾರೆ. ಇದೇ ರೀತಿಯನ್ನು ಎಲ್ಲಾ ಸರಕಾರಿ ಶಾಲೆಗಳಲ್ಲಿ ಅನುಸರಿಸಬೇಕು. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಮನೆ ಭೇಟಿ ಮಾಡಬೇಕು, ಫೋನ್ ಇನ್ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಮಕ್ಕಳಿಗೆ ಶಿಕ್ಷಣ ತಲುಪುವಂತೆ ಮಾಡುವುದು, ಹೋಮ್ವರ್ಕ್ ನೀಡಿ ಅದನ್ನು ಪುನರಾವರ್ತನೆಗೊಳಿಸುವುದು, ನುರಿತ ಶಿಕ್ಷಕರು ಸ್ಥಳಿಯವಾಗಿರುವ ದೃಶ್ಯಮಾದ್ಯಮಗಳನ್ನು ಸಂಪರ್ಕಿಸಿ ಆ ಮೂಲಕ ಪಾಠ ಮಾಡುವುದನ್ನು ಪ್ರಯತ್ನಿಸಬೇಕು. ವಿದ್ಯಾರ್ಥಿಗಳಿಗೆ ಆಸಕ್ತಿಯ ಪಠ್ಯೇತರ ಚಟುವಟಿಕೆಗಳನ್ನು ಮಾಡುವುದು, ಪ್ರತೀ ಹದಿನೈದು ದಿನಗಳೊಗೊಮ್ಮೆ ಪರೀಕ್ಷೆ ಮಾಡುವ ಮೂಲಕ ವಿದ್ಯಾರ್ಥಿಗಳನ್ನು ಜಾಗೃತಗೊಳಿಸುವ ಬಗ್ಗೆ ತಿಳಿಸಿದರು.
ದೇವನಾರಿ ಶಾಲೆಯಲ್ಲಿ ಈಗಾಗಲೆ ವಾಟ್ಸಪ್ ಗ್ರೂಪ್ ಮಾಡಿ ವಿದ್ಯಾರ್ಥಿಗಳನ್ನು ತಲುಪಲು ಪ್ರಾರಂಬಿಸಿದ್ದು ಪಠ್ಯಪುಸ್ತಕ ಸಿಗದೆ ತೊಂದರೆಯಾಗಿದೆ. ಕೂಡಲೆ ಪಠ್ಯಪುಸ್ತಕವನ್ನು ಒದಗಿಸಿ ಎಂದು ಅಲ್ಲಿನ ಮುಖ್ಯ ಶಿಕ್ಷಕಿ ಹೇಳಿದರು. ಶಿಕ್ಷಕರಿಗೆ ಈಗಾಗಲೇ ಹದಿನೈದು ದಿನದ ತರಬೇತಿ ನೀಡುವ ಬಗ್ಗೆ ಇಲಾಖೆ ಚಿಂತಿಸಿದ್ದು ಇದನ್ನು ಆನ್ಲೈನ್ ತರಬೇತಿ ಮಾಡಲು ಒತ್ತಾಯಿಸಲಾಯಿತು. ಅಲ್ಲದೆ ತಾಲೂಕಿನಲ್ಲಿ ನೆಟ್ವರ್ಕ್ ಸಮಸ್ಯೆ ಇದ್ದು ಇದನ್ನು ಸರಿಪಡಿಸಲು ಒತ್ತಾಯಿಸಲಾಯಿತು. ಬಿಎಸ್ಎನ್ಎಲ್ನಲ್ಲಿ ಸಿಬ್ಬಂದಿಗಳ ಕೊರತೆಯಿರುವುದರಿಂದ ತೊಂದರೆಯಾಗುತ್ತಿದೆ. ಇದಕ್ಕೆ ಪರಿಹಾರ ಸೂಚಿಸಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಶಿಕ್ಷಕರು ಒಂದು ವಾರಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಂಡಿರಬೇಕು ಮತ್ತು ಹೊಸ ಹೊಸ ಆಲೋಚನೆಗಳ ಮೂಲಕ ಒತ್ತಡ ರಹಿತವಾಗಿ ವಿದ್ಯಾರ್ಥಿಗಳಿಗೆ ಪಾಠ ತಲುಪುವ ಕಾರ್ಯ ಮಾಡಬೇಕು. ಪೋಷಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಮಕ್ಕಳಿಗೆ ಶಿಕ್ಷಣ ನೀಡುವ ಕುರಿತಾದ ಮಾಹಿತಿಯನ್ನು ನೀಡಬೇಕು. ಶಾಲೆ ಪ್ರಾರಂಭವಾಗುವವರೆಗೆ ಪೋಷಕರು ಹೆಚ್ಚು ವಿದ್ಯಾರ್ಥಿಗಳೊಂದಿಗೆ ಇರುವಂತೆ ಮನವೊಲಿಸಬೇಕು.ಖಾಸಗಿ ಶಾಲೆಯವರು ಈಗಾಗಲೇ ವಿವಿಧ ಯೋಜನೆಗಳನ್ನು ರೂಪಿಸಿದ್ದು ಇದರ ಮಾಹಿತಿಯನ್ನು ಪಡೆದು ಸರಕಾರಿ ಶಾಲೆಗಳಲ್ಲಿಯೂ ಇಂತಹುದೇ ಪ್ರಯೋಗವನ್ನು ಮಾಡುವ ಮೂಲಕ ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶಿಕ್ಷಣದಲ್ಲಿ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂಬ ಅಭಿಪ್ರಾಯ ಬಂತು.
ನೂರು ಶೇಕಡ ವಿದ್ಯಾರ್ಥಿಗಳನ್ನು ತಲುಪುವ ಹದಿನೈದು ಹಿರಿಯ ಪ್ರಾಥಮಿಕ ಶಾಲೆ ಹಾಗೂ ಹತ್ತು ಕಿರಿಯ ಪ್ರಾಥಮಿಕ ಶಾಲೆಗಳನ್ನು ಗುರುತಿಸಿ ಒಂದು ಶಾಲೆಗೆ ತಲಾ ಒಂದು ಲಕ್ಷ ರೂ. ಬಹುಮಾನವನ್ನು ಘೋಷಿಸಲಾಯಿತು. ಇದಕ್ಕಾಗಿ ಶಿಕ್ಷಣಾಧಿಕಾರಿಗಳ ನೇತೃತ್ವದಲ್ಲಿ ತಂಡವನ್ನು ರಚಿಸಲಾಗುತ್ತದೆ. ರಾಜ್ಯಕ್ಕೆ ಮಾದರಿಯಾಗುವಂತೆ ತಾಲೂಕಿನಲ್ಲಿ ಸರಕಾರಿ ಶಾಲೆಗಳಲ್ಲಿ ಶಿಕ್ಷಣ ನೀಡಲು ಶಿಕ್ಷಕರು ಪ್ರಯತ್ನಿಸಬೇಕು. ಎಲ್ಲಾ ಜನಪ್ರತಿನಿಧಿಗಳು ಶಿಕ್ಷಕರೊಂದಿಗೆ ಸಹಕರಿಸುವಂತೆ ಶಾಸಕ ಪೂಂಜಾ ಮನವಿ ಮಾಡಿದರು.
ಸಭೆಯಲ್ಲಿ ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಶಶಿಧರ ಕಲ್ಮಂಜ, ಜಿ.ಪಂ ಸದಸ್ಯರಾದ ಕೊರಗಪ್ಪ ನಾಯ್ಕ, ಮಮತಾ ಶೆಟ್ಟಿ, ಸೌಮ್ಯಲತಾ ಜಯಂತ್ ಗೌಡ, ಪ್ರಾಥಮಿಕ ಶಾಲಾ ಶಿಕ್ಷಕರ ಜಿಲ್ಲಾಧ್ಯಕ್ಷ ಶಿವಶಂಕರ ಭಟ್, ಯುವಜನ ಸೇವಾ ಕ್ರೀಡಾಧಿಕಾರಿ ಪ್ರಭಾಕರ್ ನಾರಾವಿ, ಸಮನ್ವಯ ಅಧಿಕಾರಿ ಶಂಭುಶಂಕರ, ದೈಹಿಕ ಪರಿವೀಕ್ಷಣಾಧಿಕಾರಿ ಭುವನೇಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಕಾರ್ಯದರ್ಶಿ ರಘುಪತಿ ಕೆ ರಾವ್, ಉಪಸ್ಥಿತರಿದ್ದರು. ಶಿಕ್ಷಣಾಧಿಕಾರಿ ತಾರಕೇಸರಿ ಸ್ವಾಗತಿಸಿ, ಶಿಕ್ಷಣ ಸಂಯೋಜಕ ಸುಭಾಷ್ ಜಾದವ್ ಕಾರ್ಯಕ್ರಮ ನಿರೂಪಿಸಿದರು.