ಉಡುಪಿ, ಜು.13 (DaijiworldNews/SM): ಉಡುಪಿ ಜಿಲ್ಲೆಯನ್ನು ಸದ್ಯಕ್ಕೆ ಲಾಕ್ಡೌನ್ ಮಾಡುವ ಅಗತ್ಯತೆ ಇಲ್ಲ. ಕೊರೋನಾ ತೀವ್ರಗತಿ ಏರುವಿಕೆಯ ಅಂಕಿ ಅಂಶವನ್ನು ಗಮನದಲ್ಲಿಟ್ಟುಕೊಂಡು ಮುಂದೆ ತೀರ್ಮಾನ ಮಾಡಬೇಕಾಗುತ್ತದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಅವರು ಕುಂದಾಪುರದಲ್ಲಿ ರೆಡ್ಕ್ರಾಸ್ ವತಿಯಿಂದ ಸರ್ಕಾರಿ ಆಸ್ಪತ್ರೆಗೆ ವೆಂಟಿಲೇಟರ್ ಹಸ್ತಾಂತರ ಕಾರ್ಯಕ್ರಮದ ಸಂದರ್ಭದಲ್ಲಿ ಸುದ್ಧಿಗಾರರ ಜೊತೆ ಮಾತನಾಡಿದರು. ಲಾಕ್ಡೌನ್ ಮಾಡುವುದರ ಬಗ್ಗೆ ಮುಖ್ಯಮಂತ್ರಿಗಳ ಜೊತೆ ನಾವೆಲ್ಲಾ ಚರ್ಚಿಸಿದಾಗ ಆಯಾಯ ಜಿಲ್ಲೆಗೆ ಲಾಕ್ಡೌನ್ ಆಗತ್ಯವಿದ್ದರೆ, ಅನಿವಾರ್ಯವಾಗಿದ್ದರೆ ಆ ಜಿಲ್ಲೆಯ ಉಸ್ತುವಾರಿ ಸಚಿವರುಗಳು, ಜನಪ್ರತಿನಿಧಿಗಳು ಕುಳಿತು ಮಾತನಾಡಿ ಕ್ರಮ ಕೈಗೊಳ್ಳಬಹುದು ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ.
ನಮ್ಮ ನಮ್ಮ ಜಿಲ್ಲೆ ಅವಶ್ಯಕತೆ, ಅನಿವಾರ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಆರೋಗ್ಯ ಇಲಾಖೆಯ ಅಧಿಕಾರಿಗಳ ಅಭಿಪ್ರಾಯವನ್ನೂ ಪಡೆದುಕೊಂಡು ಲಾಕ್ಡೌನ್ ಮಾಡುವ ತೀರ್ಮಾನವನ್ನು ಜಿಲ್ಲೆಯ ಉಸ್ತುವಾರಿ ತಿಳಿಸಲಿದ್ದಾರೆ. ಮಂಗಳೂರು ಜಿಲ್ಲೆಗೆ ಅನಿವಾರ್ಯತೆ ಇದೆ ಎಂಬ ಕಾರಣಕ್ಕೆ ಒಂದು ವಾರಗಳ ಲಾಕ್ಡೌನ್ಗೆ ತೀರ್ಮಾನ ಮಾಡಿದ್ದೇವೆ ಎಂದರು.
ಹೆಜಮಾಡಿ ಗಡಿ, ಕಾಸರಗೋಡು ಗಡಿಯ ಬಗ್ಗೆ ಈಗ ಯಾವುದೇ ತೀರ್ಮಾನ ಮಾಡಿಲ್ಲ. ಮುಂದೆ ಅನಿವಾರ್ಯವಾದರೆ ಮುಚ್ಚಬೇಕಾ ತೆರೆಯಬೇಕಾ ಎನ್ನುವುದು ಚಿಂತನೆ ಮಾಡುತ್ತೇವೆ ಎಂದರು.