ಕುಂದಾಪುರ, ಏ 13: ಪತ್ರಕರ್ತರ ಸೋಗಿನಲ್ಲಿ ಬಂದು ಲಕ್ಷ ರೂಪಾಯಿ ಕೊಡುವಂತೆ ಉದ್ಯಮಿಯೊಬ್ಬನಿಗೆ ಧಮಕಿ ಹಾಕಿ, ಹಣ ಕಸಿದು ಕೊಂಡ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಗಳನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.
ಕೋಟೇಶ್ವರದ ಎಫ್.ಎಂ.ಪ್ಲಾಸ್ಟಿಕ್ ಇಂಡಸ್ಟ್ರಿಸ್ ಎಂಬ ಹೆಸರಲ್ಲಿ ವೇಸ್ಟ್ ಪ್ಲಾಸ್ಟಿಕ್ ಕಟ್ಟಿಂಗ್ ಮತ್ತು ಹೈಡ್ರೋಲಿಕ್ ಪ್ರೆಸ್ಸಿಂಗ್ ಯೂನಿಟ್ ನಡೆಸುತ್ತಿರುವ ಫಾರುಕ್ ಅವರ ಪ್ಯಾಕ್ಟರಿಗೆ ಏಪ್ರಿಲ್ 9ರಂದು ಬೆಳಿಗ್ಗೆ 4 ಜನ ವ್ಯಕ್ತಿಗಳು 800 ಕಾರಿನಲ್ಲಿ ಬಂದಿದ್ದು ನಾವು ಪ್ರೆಸ್ಸಿನವರು, ನಾವು ರೈಡ್ ಮಾಡುವವರು. ನೀವು ಗುಲ್ಕೋಸ್ ಬಾಟಲಿಗಳನ್ನು ತಗೆದುಕೊಳ್ಳಬಾರದು ಎಂದು ಚೀಲದಲ್ಲಿ ತುಂಬಿದ್ದ ಬಾಟಲಿಗಳನ್ನು ಬಿಸಾಕಿ, ಇದನ್ನು ಅಧಿಕಾರಿಗಳು ಕಂಡರೆ 5 ಲಕ್ಷ ಫೆನಾಲ್ಟಿ ಆಗುತ್ತದೆ. ಇದನ್ನು ತೋರಿಸಿಕೊಟ್ಟರೆ ನಮಗೆ 1ಲಕ್ಷ ಕೊಡುತ್ತಾರೆ. ನೀವು ಈಗ ಒಂದು ಲಕ್ಷ ಕೊಡಿ ಇಲ್ಲದಿದ್ದರೆ ಸಂಭಂದಪಟ್ಟ ಅಧಿಕಾರಿಗಳಿಗೆ ಹೇಳುತ್ತೇವೆ ಎಂದು ಎರಡು ದಿನಗಳ ಗಡುವು ಕೊಟ್ಟು ಹೋಗಿದ್ದರು. ಬಳಿಕ ಕರೆ ಮಾಡಿದ ವ್ಯಕ್ತಿ ಎಷ್ಟು ಹೊತ್ತಿಗೆ ಬರಬೇಕು ಎಂದು ಕೇಳಿದ್ದ. ಏಪ್ರಿಲ್ 12ರಂದು ಬೆಳಿಗ್ಗೆ ಅದೇ ಕಾರಿನಲ್ಲಿ ಬಂದ ಮೂರು ವ್ಯಕ್ತಿಗಳು ಬೇಗ ಹಣ ಕೊಡಿ ಕಾಯಲಿಕ್ಕೆ ಆಗುವುದಿಲ್ಲ ಎನ್ನುತ್ತಾರೆ. ಆಗ ಫಾರೂಕ್ ನಾನು ಕಾನೂನು ಪ್ರಕಾರ ಹೋಗುತ್ತೇನೆ ಎಂದಾಗ ಇಬ್ಬರು ಫಾರೂಕ್ ಅವರಲ್ಲಿ ಇದ್ದ ರೂ.5000ವನ್ನು ಕಸಿದುಕೊಂಡು ನಿನ್ನ ಪ್ಯಾಕ್ಟರಿಯ ಮಾನ ಹರಾಜು ಹಾಕುತ್ತೇನೆ ಎಂದು ಧಮಕಿ ಹಾಕಿದ್ದರು . ಈ ಬಗ್ಗೆ ಫಾರೂಕ್ ಅವರು ತಕ್ಷಣ ಕುಂದಾಪುರ ಠಾಣೆಯಲ್ಲಿ ದೂರು ದಾಖಲಿಸಿ , ನನ್ನನ್ನು ಬಲವಂತವಾಗಿ ಹಿಡಿದುಕೊಂಡ ವ್ಯಕ್ತಿ ಧರ್ಮೇಂದ್ರ ಮತ್ತು ಮಂಜುನಾಥ, ಕಿಸೆಯಿಂದ ಹಣ ಕಸಿದುಕೊಂಡವ ಲೋಕೇಶ ಹಾಗೂ ಈ ಮೂವರ ಜೊತೆ ವಿಕ್ಕಿ ಯಾನೆ ವಿಕ್ರಮ ಎನ್ನುವ ವ್ಯಕ್ತಿಯೂ ಬಂದಿದ್ದ ಎಂದು ದೂರು ನೀಡುತ್ತಾರೆ.
ಪಿರ್ಯಾದಿಯ ದೂರನ್ನು ದಾಖಲಿಸಿಕೊಂಡ ಪೊಲೀಸ್ ಉಪ ನಿರೀಕ್ಷಕರು ಕಲಂ 384, 392, 506 ಮತ್ತು 34ಐಪಿಸಿಯಂತೆ ಪ್ರಕರಣ ದಾಖಲಿಸಿಕೊಂಡು ಕಾರ್ಯಪ್ರವೃತ್ತರಾದ ಪೊಲೀಸರು ಕೂಡಲೇ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳು ಪೊಲೀಸರ ವಶದಲ್ಲಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.