ಕಾಸರಗೋಡು,ಜು14 (Daijiworld News/MSP): ಕುಂಬಳೆ ಅಬಕಾರಿ ದಳದ ಸಿಬಂದಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಸುಮಾರು 2. 87 ಕೋಟಿ ರೂ . ಹವಾಲ ಹಣ ಹಾಗೂ 20 ಪವನ್ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದು , ಮಂಗಳೂರು ಮೂಲದ ಯುವಕನೋರ್ವನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಮೂಲತಃ ಮಂಗಳೂರು ನಿವಾಸಿ , ಪ್ರಸ್ತುತ ಮಂಜೇಶ್ವರ ಉದ್ಯಾವರದಲ್ಲಿ ವಾಸವಾಗಿರುವ ಇರ್ಷಾದ್ (33) ಬಂಧಿತ ಯುವಕ. ಜು.13 ರ ಸೋಮವಾರ ರಾತ್ರಿ ರಾಷ್ಟೀಯ ಹೆದ್ದಾರಿಯ ತೂಮಿನಾಡು ಎಂಬಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ಅಬಕಾರಿ ದಳದ ಸಿಬಂದಿಗಳು ನಡೆಸಿದ ಕಾರ್ಯಾಚರಣೆಯಿಂದ ಹವಾಲ ಸಾಗಾಟ ಬೆಳಕಿಗೆ ತರಲಾಗಿದೆ.
ಅಬಕಾರಿ ದಳದ ಸಿಬಂದಿಗಳನ್ನು ಕಂಡು ಪರಾರಿಯಾದ ಸ್ವಿಪ್ಟ್ ಕಾರನ್ನು ಬೆನ್ನ ಟ್ಟಿದ ಸಿಬಂದಿಗಳು ವಶಕ್ಕೆ ತೆಗೆದು ತಪಾಸಣೆ ನಡೆಸಿದಾಗ ಹಣ ಪತ್ತೆಯಾಗಿದೆ. ಎರಡು ಸಾವಿರ ಹಾಗೂ 500 ರೂ . ಮುಖಬೆಲೆಯ ನೋಟುಗಳನ್ನು ಸಾಗಿಸಲಾಗುತ್ತಿತ್ತು. ವಶಪಡಿಸಿಕೊಂಡ ನಗದು ಹಾಗೂ ಚಿನ್ನಭರಣವನ್ನು ಮುಂದಿನ ತನಿಖೆಗಾಗಿ ಮಂಜೇಶ್ವರ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.