ಉಡುಪಿ, ಜು14 (Daijiworld News/MSP): ಕೊರೊನಾ ನಿಯಂತ್ರಣದ ಹಿನ್ನಲೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಲಾಕ್ ಡೌನ್ ಜಾರಿಗೊಳಿಸುವ ಬದಲು 14 ದಿನಗಳವರೆಗೆ ಉಡುಪಿ ಜಿಲ್ಲೆಯ ಎಲ್ಲಾ ಗಡಿಗಳನ್ನು ಸೀಲ್ಡೌನ್ ಮಾಡುವ ಕುರಿತು ಮಂಗಳವಾರ ಬೆಳಗ್ಗೆ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಉಡುಪಿ ಜಿಲ್ಲೆಯ ಎಲ್ಲಾ ಶಾಸಕರ ಹಾಗೂ ಅಧಿಕಾರಿಗಳ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ.

ಸಭೆಯಲ್ಲಿ ಉಡುಪಿ ಜಿಲ್ಲಾ ಗಡಿಭಾಗದಿಂದ ಹೊರಗೆ ಹೋಗುವವರಿಗೆ ಮತ್ತು ಒಳಗೆ ಬರುವವರಿಗೆ ಜು. 15 ರ ಬುಧವಾರ ರಾತ್ರಿ 8:00 ಗಂಟೆಯವರೆಗೆ ಅವಕಾಶ ಕಲ್ಪಿಸಲು ಹಾಗೂ ನಾಳೆಯಿಂದ ಬಸ್ ಸಹಿತ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಸ್ಥಗಿತಗೊಳಿಸಲು ತೀರ್ಮನಿಸಲಗಿದೆ. ಇದರೊಂದಿಗೆ ರಾಜ್ಯ ಸರ್ಕಾರದ ಹಿಂದಿನ ಆದೇಶದಂತೆ ಭಾನುವಾರ ಸಂಪೂರ್ಣ ಲಾಕ್ಡೌನ್ ಯಥಾಸ್ಥಿತಿ ಮುಂದುವರೆಯಲಿದೆ.
ಸಭೆಯಲ್ಲಿ ಕಾರ್ಕಳ ಶಾಸಕರಾದ ಸುನೀಲ್ ಕುಮಾರ್, ಬೈಂದೂರು ಶಾಸಕರಾದ ಸುಕುಮಾರ್ ಶೆಟ್ಟಿ, ಕಾಪು ಶಾಸಕರಾದ ಲಾಲಾಜಿ ಆರ್ ಮೆಂಡನ್, ಕುಂದಾಪುರ ಶಾಸಕರಾದ ಶ್ರೀನಿವಾಸ್ ಶೆಟ್ಟಿ ಮತ್ತು ಜಿಲ್ಲಾಧಿಕಾರಿಗಳ ಜಿ ಜಗದೀಶ್, ಜಿಲ್ಲಾ ಪಂಚಾಯಿತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಪ್ರೀತಿ ಗೆಲ್ಹೋತ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಾದ ಎನ್. ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿಗಳಾದ ಸದಾಶಿವ ಪ್ರಭು, ಸಹಾಯಕ ಆಯುಕ್ತರಾದ ಕೆ. ರಾಜು, ಜಿಲ್ಲಾ ಆರೋಗ್ಯ ಅಧಿಕಾರಿಗಳಾದ ಸುಧೀರ್ ಚಂದ್ರ ಸೂಡ, ಜಿಲ್ಲಾ ಕೋವಿಡ್ ನೋಡಲ್ ಅಧಿಕಾರಿಗಳಾದ ಪ್ರಶಾಂತ್ ಭಟ್, ಜಿಲ್ಲಾ ಸರ್ಜನ್ ಮಧುಸೂದನ್ ಮತ್ತು ಇತರ ಅಧಿಕಾರಿಗಳು ಉಪಸ್ಥಿತರಿದ್ದರು.