ಪುತ್ತೂರು, ಜು.14 (DaijiworldNews/MB) : ಪುತ್ತೂರು ಹಾಗೂ ಕಡಬ ತಾಲೂಕಿನಲ್ಲಿ ಮತ್ತೆ ಮೂವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.

ಕಡಬ ತಾಲೂಕಿನ ಐತ್ತೂರು ಗ್ರಾಮದ ಕಲ್ಲಾಜೆ ನಿವಾಸಿ 39 ವರ್ಷದ ಯುವಕನಿಗೆ, ಪುತ್ತೂರು ತಾಲೂಕಿನ ಉಪ್ಪಿನಂಗಡಿ ನಟ್ಟಿಬೈಲು ನಿವಾಸಿ 70 ವರ್ಷದ ವ್ಯಕ್ತಿಗೆ ಹಾಗೂ ಪುತ್ತೂರು ನಗರಸಭಾ ವ್ಯಾಪ್ತಿಯ ಮೊಟೆತ್ತಡ್ಕದ ೬೨ ವರ್ಷದ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಆಗಿದೆ.
ಕಡಬದ ಕಲ್ಲಾಜೆಯ ಕೊರೊನಾ ದೃಢಪಟ್ಟ ಯುವಕನು ಮಹಾರಾಷ್ಟ್ರದಲ್ಲಿ ಉದ್ಯೋಗಿಯಾಗಿದ್ದು ಆತನ ಸಹೋದ್ಯೋಗಿಗೆ ಕೊರೊನಾ ದೃಢಪಟ್ಟ ಹಿನ್ನಲೆ ಆತನು ಕೂಡಾ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದ. ಇದೀಗ ಕೊರೊನಾ ಸೋಂಕು ದೃಢಪಟ್ಟಿದೆ.
ಇನ್ನು ಪುತ್ತೂರು ತಾಲೂಕಿನ ನಟ್ಟಿಬೈಲು ನಿವಾಸಿ 70 ವರ್ಷದ ವ್ಯಕ್ತಿಗೆ ಜ್ವರ ಕಾಣಿಸಿಕೊಂಡ ಕಾರಣದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು ಇವರಿಗೆ ಮಂಗಳವಾರ ಕೊರೊನಾ ಸೋಂಕು ಇರುವುದು ಖಚಿತವಾಗಿದೆ.
ಪುತ್ತೂರು ನಗರಸಭಾ ವ್ಯಾಪ್ತಿಯ ಮೊಟೆತ್ತಡ್ಕದ 62 ವರ್ಷದ ವ್ಯಕ್ತಿಯೂ ಕೂಡಾ ಜ್ವರವಿದ್ದ ಕಾರಣದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು ಇದೀಗ ಕೊರೊನಾ ದೃಢಪಟ್ಟಿದೆ.
ಇನ್ನು ಪುತ್ತೂರು ಹಾಗೂ ಕಡಬ ತಾಲೂಕಿನಲ್ಲಿ ಈವರೆಗೆ ಒಟ್ಟು 56 ಕೊರೊನಾ ಪ್ರಕರಣಗಳು ದಾಖಲಾಗಿದ್ದು ಇಬ್ಬರು ಕೊರೊನಾದಿಂದ ಸಾವನ್ನಪ್ಪಿದ್ದಾರೆ.