ಗದಗ, ಏ 13: ರಾಜ್ಯದಲ್ಲಿ ಕಳೆದ ಐದು ವರ್ಷಗಳಲ್ಲಿ 3500ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡರೂ ಸಿಎಂ ಸಿದ್ದರಾಮಯ್ಯ ಆರಾಮಾಗಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಟೀಕಿಸಿದ್ದಾರೆ.
ರೋಣ ತಾಲೂಕು ಅಬ್ಬಿಗೇರಿಯಲ್ಲಿ ನಡೆದ ಮುಷ್ಟಿ ಧಾನ್ಯ ಸಂಗ್ರಹ ಅಭಿಯಾನದ ಸಮರೋಪದಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏನೂ ಆಗಿಲ್ಲ ಎಂಬಂತೆ ನಿದ್ರಿಸುತ್ತಿದ್ದಾರೆ. ರೈತರ ಬಗ್ಗೆ ಕನಿಕರ, ನೋವು ಕೂಡ ವ್ಯಕ್ತಪಡಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೋದಿ ಸರಕಾರ ಕೃಷಿಕರ ಅಭ್ಯುದಯಕ್ಕಾಗಿ ಸಾಕಷ್ಟು ಯೋಜನೆಗಳನ್ನು ರೂಪಿಸಿದ್ದಾರೆ. ಫಸಲ್ಭಿಮಾ ಯೋಜನೆಯ ಅಡಿಯಲ್ಲಿ ಈ ಭಾಗದಲ್ಲಿ 100 ಕೋಟಿ ರೂ.ಗೂ ಹೆಚ್ಚು ಪರಿಹಾರ ನೀಡಲಾಗಿದೆ. ಆದರೆ, ರಾಜ್ಯ ಸರಕಾರ ಕೇಂದ್ರದ ಯೋಜನೆಗಳನ್ನು ಜನರಿಗೆ ಸರಿಯಾಗಿ ತಲುಪಿಸಿಲ್ಲ ಎಂದು ದೂರಿದರು.
ಬಿಜೆಪಿ ಆಡಳಿತವಿರುವ ಗುಜರಾತ್, ಮಧ್ಯಪ್ರದೇಶ, ಛತ್ತೀಸಗಡದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿ ನಡೆದಿಲ್ಲ. ಮಹಾರಾಷ್ಟ್ರದಲ್ಲಿ ಆತ್ಮಹತ್ಯೆ ಪ್ರಕರಣಗಳು 30ರಷ್ಟು ಕಡಿಮೆಯಾಗಿವೆ ಎಂದು ಹೇಳಿದರು.