ಉಡುಪಿ, ಜು.14 (DaijiworldNews/MB) : ಕೊರೊನಾ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಲಾಕ್ಡೌನ್ ಮಾಡುವ ಬದಲಾಗಿ ಜಿಲ್ಲೆಯ ಗಡಿಗಳನ್ನು ಜುಲೈ 15 ರಿಂದ 14 ದಿನಗಳ ಕಾಲ ಸೀಲ್ಡೌನ್ ಮಾಡುವ ತೀರ್ಮಾನವನ್ನು ಉಡುಪಿ ಜಿಲ್ಲಾಡಳಿಯ ಕೈಗೊಂಡಿದ್ದು ಕೆಲವೊಂದು ನಿರ್ಬಂಧಗಳನ್ನು ಜಿಲ್ಲಾಡಳಿತ ವಿಧಿಸಿ ಕೆಲವೊಂದು ವಿನಾಯಿತಿ ನೀಡಿದೆ.

ಜಿಲ್ಲೆಯ ಒಳಗೆ ಎಲ್ಲಾ ಆರ್ಥಿಕ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದ್ದು ಅಂತರ್ ರಾಜ್ಯ ಹಾಗೂ ಅಂತರ್ ಜಿಲ್ಲಾ ಸರಕು ಸಾಗಾಣಿಕೆ ಅಥವಾ ವಸ್ತುಗಳ ಸಾಗಾಣಿಕೆಗೂ ಅವಕಾಶ ನೀಡಲಾಗಿದೆ. ಹಾಗೆಯೇ ಹೊರ ರಾಜ್ಯ ಅಥವಾ ಜಿಲ್ಲೆಯಿಂದ ಬರುವವರಿಗೆ ಹಾಗೂ ಹೋಗುವವರಿಗೆ ಜುಲೈ 15 ರ ಸಂಜೆ 8 ಗಂಟೆಯವರೆಗೆ ಮಾತ್ರ ಅವಕಾಶ ನೀಡಲಾಗಿದೆ.
ಇನ್ನು ಸೀಲ್ಡೌನ್ ಸಂದರ್ಭದಲ್ಲಿ ಸಾರ್ವಜನಿಕ ಬಸ್ ಸಂಚಾರ ಇರುವುದಿಲ್ಲ. ಹಾಗೆಯೇ ಯಾವುದೇ ಸಂತೆಗಳು ಕೂಡಾ ಇರುವುದಿಲ್ಲ. ಯಾವುದೇ ಧಾರ್ಮಿಕ, ರಾಜಕೀಯ, ಸಾಮಾಜಿಕ ಸಭೆ, ಸಮಾರಂಭಗಳು ಕೂಡಾ ನಡೆಸಲು ಅನುಮತಿ ಇಲ್ಲ. ಸಾರ್ವಜನಿಕವಾಗಿ ಹಬ್ಬ ಆಚರಣೆಗಳಿಗೂ ಅವಕಾಶವಿಲ್ಲ.
ಆದರೆ ಮೊದಲೇ ನಿರ್ಧರಿಸಲಾಗಿರುವ ವಿವಾಹ ಕಾರ್ಯಕ್ರಮಕ್ಕಾಗಿ ತಹಶೀಲ್ದಾರರಿಂದ ಕಡ್ಡಾಯವಾಗಿ ಅನುಮತಿ ಪಡೆದು 50 ಕ್ಕೂ ಅಧಿಕ ಮಂದಿ ಸೇರದೆ ಕಾರ್ಯಕ್ರಮ ನಡೆಸಬಹುದಾಗಿದೆ. ಹಾಗೆಯೇ ಈಗಾಗಲೇ ಸರ್ಕಾರ ನೀಡಿರುವ ಆದೇಶದಂತೆ ಅಂತ್ಯ ಸಂಸ್ಕಾರದಲ್ಲಿ 20 ಜನರು ಮಾತ್ರ ಭಾಗವಹಿಸಬಹುದಾಗಿದೆ.
ದೇವಸ್ಥಾನ, ಚರ್ಚ್, ಮಸೀದಿಗಳಲ್ಲಿ ಸಾರ್ವಜನಿಕ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗಿದ್ದು ಈ ಸಂದರ್ಭದಲ್ಲಿ ಅರ್ಚಕರು, ಮೌಲ್ವಿ, ಧರ್ಮಗುರುಗಳು ಸೇರಿದಂತೆ 20 ಜನರು ಮಾತ್ರ ಇರಬೇಕು. ಅದಕ್ಕಿಂತ ಹೆಚ್ಚಿನ ಜನರು ಸೇರಲು ಅವಕಾಶವಿಲ್ಲ. ಹಾಗೆಯೇ ಯಾವುದೇ ವಿಶೇಷ ಪೂಜೆ, ಧಾರ್ಮಿಕ ಕಾರ್ಯಕ್ರಮ ನಡೆಸಲು ಅವಕಾಶವಿಲ್ಲ.
ಇನ್ನು ಅಂಗಡಿ ಮುಗ್ಗಟ್ಟುಗಳು ಸ್ವಯಂಪ್ರೇರಿತವಾಗಿ ಬಂದ್ ಮಾಡಲು ತೀರ್ಮಾನ ಕೈಗೊಳ್ಳಬಹುದಾಗಿದೆ. ಆದರೆ ಸರ್ಕಾರದ ಆದೇಶದ ಪ್ರಕಾರ ಎಲ್ಲಾ ಆರ್ಥಿಕ ಚಟುವಟಿಕೆ ನಡೆಸಬಹುದಾಗಿದೆ.
ಈ ಹಿಂದೆಯೇ ರಾಜ್ಯ ಸರ್ಕಾರ ಆದೇಶಿಸಿರುವ ಭಾನುವಾರದ ಲಾಕ್ಡೌನ್ ಎಂದಿನಂತೆ ಮುಂದುವರೆಯಲಿದೆ.