ಬೆಳ್ಮಣ್, ಜು 14 (DaijiworldNews/PY): ನಂದಳಿಕೆ ಶ್ರೀ ಲಕ್ಷ್ಮೀಜನಾರ್ದನ ಇಂಟರನ್ಯಾಷನಲ್ ಸ್ಕೂಲ್ನ ನಿರೀಕ್ಷಾ ಕೋಟ್ಯಾನ್ ಪಿಯುಸಿ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ 591 ಅಂಕಗಳೊಂದಿಗೆ 98.5% ಅಂಕಗಳಿಸಿ ರಾಜ್ಯಕ್ಕೆ 6 ನೇ ರ್ಯಾಂಕ್ ಗಳಿಸಿದ್ದಾರೆ.


ನಿರೀಕ್ಷಾ ಭೌತ ಶಾಸ್ತ್ರದಲ್ಲಿ 100, ಗಣಿತದಲ್ಲಿ 100, ಜೀವಶಾಸ್ತ್ರದಲ್ಲಿ 100, ಕನ್ನಡದಲ್ಲಿ 99, ರಸಾಯನ ಶಾಸ್ತ್ರದಲ್ಲಿ 98 ಹಾಗೂ ಆಂಗ್ಲಭಾಷಾ ವಿಷಯದಲ್ಲಿ 94 ಅಂಕಗಳೊಂದಿಗೆ ಶ್ರೇಷ್ಠ ಸಾಧನೆ ತೋರಿದ್ದಾಳೆ.
ತಂದೆಯನ್ನು ಕಳೆದುಕೊಂಡಿದ್ದ ಕಾರ್ಕಳ ತಾಲೂಕಿನ ಇನ್ನಾ ಗ್ರಾಮದ ನಿರೀಕ್ಷಾ ಕೋಟ್ಯಾನ್ಗೆ ತಾಯಿಯೇ ಮೊದಲ ಗುರುವಾಗಿ ಬೀಡಿ ಕಟ್ಟಿ ಶಾಲೆ ಓದಿಸಿದರು. ಬಾಲ್ಯದಿಂದಲೂ ಕಲಿಕೆಯತ್ತ ಒಲವು ತೋರುತ್ತಿದ್ದ ನಿರೀಕ್ಷಾ ನಿರೀಕ್ಷೆಯಂತೆ ಎಸ್ಎಸ್ಎಲ್ಸಿಯಲ್ಲಿಯೂ ನಂದಳಿಕೆ ಶ್ರೀ ಲಕ್ಷ್ಮೀಜನಾರ್ದನ ಇಂಟರ್ನ್ಯಾಷನಲ್ ಸ್ಕೂಲ್ಗೆ ಟಾಪರ್ ಆಗಿದ್ದಳು. ಯಾವುದೇ ಕೋಚಿಂಗ್ ಇಲ್ಲದೆ ಕಾಲೇಜಿನಲ್ಲಿ ಗುರುಗಳು ಕಲಿಸಿದ ಪಾಠವನ್ನೇ ಕರಗತ ಮಾಡಿಕೊಂಡಿದ್ದ ನಿರೀಕ್ಷಾ ಇದೀಗ ರಾಜ್ಯಕ್ಕೇ 6ನೇ ರ್ಯಾಂಕ್ ಗಳಿಸುವಲ್ಲಿ ಸಫಲಳಾಗಿದ್ದಾಳೆ. ಮುಂದೆ ಸಿಇಟಿ, ನೀಟ್, ಜೆಇಇ ಪರೀಕ್ಷೆ ಎದುರಿಸಲಿರುವ ನಿರೀಕ್ಷಾಗೆ ಜೀವಶಾಸ್ತ್ರ ಕ್ಷೇತ್ರ ಆಸಕ್ತಿಯಾಗಿದೆ.