ಬೆಳ್ಮಣ್, ಜು 15 (Daijiworld News/MSP): ಕಳೆದ ಸುಮಾರು 29 ವರ್ಷಗಳಿಂದ ಮೂರ್ತೆಗಾರಿಕೆ ಮಾಡುತಿದ್ದ ವ್ಯಕ್ತಿಯೊಬ್ಬರು ತಾಳೆ ಮರದಲ್ಲಿ ಪ್ರಜ್ಞೆ ಕಳೆದುಕೊಂಡು ಸುಮಾರು ಎರಡು ಗಂಟೆಗಳ ಕಾಲ ಮರದ ದಂಡುಗಳ ನಡುವೆ ಸಿಲುಕಿ ಕೊನೆಗೂ ಪವಾಡಸದೃಶ ರೀತಿಯಲ್ಲಿ ಬದುಕುಳಿದ ಘಟನೆ ಮಂಗಳವಾರ ಕಡಂದಲೆಯಲ್ಲಿ ನಡೆದಿದೆ.



ಕಡಂದಲೆ ಕಲ್ಲೋಳಿಯ ಸಂತೋಷ್ ಎಂಬವರು ಎಂದಿನಂತೆ ಶೇಂದಿ ತೆಗೆಯಲೆಂದು ಬೆಳಿಗ್ಗೆ 6.30ರ ಹೊತ್ತಿಗೆ ತಾಳೆ ಮರವೇರಿದವರು ರಕ್ತದೊತ್ತಡ ಕಡಿಮೆಯಾದ ಪರಿಣಾಮ ಪ್ರಜ್ಞೆ ತಪ್ಪಿ ಬೆಳಗ್ಗೆ 8.30ರವರೆಗೆ ತಾಳೆ ಮರದ ದಂಡುಗಳ ನಡುವಲ್ಲಿ ಸಿಲುಕಿದ್ದರು.
ಇದನ್ನು ಕಂಡ ದಾರಿಹೋಕರು ರಕ್ಷಿಸಲು ಮುಂದಾಗಿಲ್ಲ. ಇದೇ ವೇಳೆ ಹೊಟೇಲ್ ಮಾಲೀಕರಾದ ಸುಧಾಕರ್ ಸಾಲ್ಯಾನ್ ಅವರು ಶೇಂದಿ ತರಲು ಎಂದಿನಂತೆ ತಮ್ಮ ಕಾರಿನಲ್ಲಿ ಬಂದಿದ್ದಾರೆ. ತಕ್ಷಣ ಅಲ್ಲಿ ಸೇರಿದ್ದ ಜನರನ್ನು ಗಮನಿಸಿ ಆಗ್ನಿಶಾಮಕ ದಳಕ್ಕೆ ಮಾಹಿತಿ ರವಾನಿಸಿದ್ದಾರೆ. ಜೊತೆಗೆ ಅದೇ ಊರಿನ ತಾಳೆ ಮರವೇರುವ ನಾರಾಯಣ, ದಿನೇಶ್ ಹಾಗೂ ಅಶೋಕ್ ಅವರಿಗೂ ವಿಚಾರ ರವಾನಿಸಿದ್ದಾರೆ. ಸ್ಥಳಕ್ಕೆ ಬಂದ ಯುವಕರು ಮರವೇರಿದ್ದಾರೆ. ಅದೇ ವೇಳೆ ಅಲ್ಲಿಗೆ ಆಗಮಿಸಿದ ಅಗ್ನಿ ಶಾಮಕ ಸಿಬ್ಬಂದಿಗಳು ಸ್ಥಳೀಯ ಯುವಕರ ಸಹಕಾರದೊಂದಿಗೆ ಸಂತೋಷ್ ಅವರನ್ನು ಹಗ್ಗದ ಮೂಲಕ ಕೆಳಗಿಳಿಸಿದ್ದಾರೆ.
ಸುಧಾಕರ್ ಅವರ ಕಾರಿನಲ್ಲಿ, ಆಸ್ಪತ್ರೆಗೆ ಸಾಗಿಸುತ್ತಿರುವಾಗ ಪ್ರಜ್ಞೆ ತಪ್ಪಿದ್ದ ಸಂತೋಷ್ ಅವರು ಎಚ್ಚರಗೊಂಡಿದ್ದಾನೆ. ಸೂಕ್ತ ಸಮಯಕ್ಕೆ ಬಂದು ಸಂತೋಷ ಅವರ ಜೀವವುಳಿಸಿದ ಸುಧಾಕರ ಸಾಲ್ಯಾನ್, ಅಶೋಕ, ದಿನೇಶ, ನಾರಾಯಣ ಹಾಗೂ ಅಗ್ನಿಶಾಮಕದಳದವರ ಸಾಹಸ ಸ್ಥಳೀಯರ ಪ್ರಸಂಸೆಗೆ ಪಾತ್ರವಾಗಿದೆ.