ಮಂಗಳೂರು, ಜು. 15, (DaijiworldNews/SM): ದ.ಕ. ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಬುಧವಾರ ರಾತ್ರಿ 8 ಗಂಟೆಯಿಂದ ಒಂದುವಾರಗಳ ಕಾಲ ದ.ಕ. ಜಿಲ್ಲೆ ಲಾಕ್ ಆಗಿರಲಿದೆ.

ನಾಳೆಯಿಂದ ಜಿಲ್ಲೆಯಲ್ಲಿ ಅಗತ್ಯ ಸೇವೆಗಳನ್ನು ಹೊರತುಪಡಿಸಿದಂತೆ ಉಳಿದೆಲ್ಲವೂ ಬಂದ್ ಆಗಿರಲಿದೆ. ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 11 ಗಂಟೆಯ ತನಕ ವಿನಾಯಿತಿ ನೀಡಲಾಗಿದೆ.
ಇನ್ನು ಅನಗತ್ಯವಾಗಿ ಜನರ ಓಡಾಟಕ್ಕೆ ಸಂಪೂರ್ಣ ಬ್ರೇಕ್ ಹಾಕಲಾಗಿದೆ. ಅತೀ ಅಗತ್ಯವಿದ್ದಲ್ಲಿ ಮಾತ್ರವೇ ತೆರಳಲು ಅವಕಾಶ ಇರಲಿದೆ. ಉಳಿದಂತೆ ಯಾವುದೇ ವಿನಾಯಿತಿ ಇರುವುದಿಲ್ಲ. ಸೋಂಕು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ.
ಜನರ ಸಹಕಾರ ಅತೀ ಅಗತ್ಯ:
ಇನ್ನು ಸೋಂಕು ನಿಯಂತ್ರಿಸಲು ಲಾಕ್ ಡೌನ್ ಅನಿವಾರ್ಯವಾದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಸರಕಾರಗಳೊಂದಿಗೆ ಜನರು ಸಹಕಾರ ನೀಡುವುದು ಅತೀ ಅಗತ್ಯವಾಗಿದೆ. ಸಾರ್ವಜನಿಕರ ಪಾತ್ರ ಪ್ರಮುಖವಾಗಿದ್ದು ಸರಕಾರದೊಂದಿಗೆ ಸಾರ್ವಜನಿಕರು ಕೈಜೋಡಿಸುವುದು ಅಗತ್ಯವಾಗಿದೆ.
ಮನೆಯಿಂದ ಹೊರ ನಡೆಯುವ ಸಂದರ್ಭದಲ್ಲಿ ಕಡ್ಡಾಯ ಮಾಸ್ಕ್ ಧರಿಸುವುದು, ಎಲ್ಲಾ ಪ್ರದೇಶಗಳಲ್ಲೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ತಪ್ಪದೇ ಪ್ರತಿಯೊಬ್ಬರು ಪಾಲಿಸಲೇ ಬೇಕಾಗಿದೆ. ಅಂಗಡಿ ಮಳಿಗೆಗಳಲ್ಲಿ ಜನಜಂಗುಳಿಗೆ ಅವಕಾಶ ನೀಡದೆ, ತಮ್ಮ ಕರ್ತವ್ಯದ ಬಗ್ಗೆ ಯೋಚಿಸಬೇಕಾಗಿದೆ. ಇನ್ನು ಸರಕಾರ ಜಿಲ್ಲಾಡಳಿತ ಹೊರಡಿಸಿರುವ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸುವುದು ಜನರ ಪ್ರಮುಖಪಾತ್ರವಾಗಿದೆ.