ಮಂಗಳೂರು, ಜು. 15, (DaijiworldNews/SM): ದ.ಕ. ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಿಸುವ ಹಿನ್ನೆಲೆಯಲ್ಲಿ ಜುಲೈ 15ರ ರಾತ್ರಿ 8 ಗಂಟೆಯಿಂದ ಜುಲೈ 23ರ ಬೆಳಗ್ಗೆ 5 ಗಂಟೆಯ ತನಕ ಲಾಕ್ ಡೌನ್ ಆದೇಶವಿದ್ದು, ಈ ಸಂದರ್ಭದಲ್ಲಿ ಅಗತ್ಯ ಸೇವೆಗಳನ್ನು ಹೊರತು ಪಡಿಸಿ ಉಳಿದೆಲ್ಲವುಗಳನ್ನು ನಿಷೇಧಿಸಲಾಗಿದೆ ಎಂದು ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ.

ಮಾಧ್ಯಮ ಪ್ರಕಟನೆ ಹೊರಡಿಸಿರುವ ವರಿಷ್ಠಾಧಿಕಾರಿಗಳು, ಲಾಕ್ ಡೌನ್ ಅವಧಿಯಲ್ಲಿ ಕಂಟೈನ್ ಮೆಂಟ್ ವಲಯಗಳನ್ನು ಹೊರತುಪಡಿಸಿ ಉಳಿದ ಪ್ರದೇಶಗಳಲ್ಲಿ ಪ್ರತೀ ದಿನ ಬೆಳಿಗ್ಗೆ 8ರಿಂದ 11 ಗಂಟೆಯ ತನಕ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ. ಪಡಿತರ ಅಂಗಡಿ, ದಿನಸಿ ಅಂಗಡಿ, ಹಣ್ಣು ತರಕಾರಿ ಅಂಗಡಿಗಳನ್ನು ತೆರೆಯಬಹುದಾಗಿದೆ.
ನಿಯಮ ಉಲ್ಲಂಘಿಸಿದ್ದಲ್ಲಿ ಕಠಿಣ ಕ್ರಮ:
ಇನ್ನು ಲಾಕ್ ಡೌನ್ ನಿಯಮ ಉಲ್ಲಂಘಿಸಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ವರಿಷ್ಠಾಧಿಕಾರಿ ಎಚ್ಚರಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಲಾಕ್ ಡೌನ್ ನಿಯಮಾವಳಿಗಳನ್ನು ಸಮರ್ಪಕವಾಗಿ ಪಾಲಿಸಬೇಕು. ಕೊರೊನಾ ಹರಡುವುದನ್ನು ತಡೆಯುವಲ್ಲಿ ಸಾರ್ವಜನಿಕರು ಸಹಕರಿಸಬೇಕು ಎಂದು ವರಿಷ್ಟಾಧಿಕಾರಿಗಳು ತಿಳಿಸಿದ್ದಾರೆ.
ಅಗತ್ಯ ಸೇವೆಗಳು ಲಭ್ಯ:
ಎಲ್ಲಾ ಆರೋಗ್ಯ ಸಂಬಂಧಿಸಿದ ಸೇವೆಗಳು
ಕೃಷಿ ಹಾಗೂ ಕೃಷಿ ಸಂಬಂಧಿಸಿದ ಚಟುವಟಿಕೆಗಳು
ಎಲ್ಲಾ ಬಗೆಯ ಸರಕು ಸಾಗಾಣಿಕೆ
ಜೀವನಾವಶ್ಯಕ ವಸ್ತುಗಳನ್ನು ಹಾಗೂ ವೈದ್ಯಕೀಯ ಉಪಕರಣಗಳನ್ನು ಪೂರೈಸುವ ಕೈಗಾರಿಕೆಗಳು
ಅಗ್ನಿಶಾಮಕ, ವಿಪತ್ತು ನಿರ್ವಹಣೆ ಮತ್ತು ಇತರೆ ತುರ್ತುಸೇವೆಗಳು
ಅಗತ್ಯ ಸೇವೆಗಳನ್ನು ನಿರ್ವಹಿಸುವ ಕಚೇರಿಗಳು