ಕುಂದಾಪುರ, ಜು 16 (Daijiworld News/MSP): ಕುಂದಾಪುರ ತಾಲೂಕು ಪಂಚಾಯತ್ ವಿಭಜನೆಗೊಂಡಿದ್ದು, 14 ಸದಸ್ಯರು ಬೈಂದೂರು ತಾಲೂಕು ಪಂಚಾಯತಿಗೆ ಸೇರಿರುವುದರಿಂದ ಉಳಿದ ಸದಸ್ಯರುನ್ನೊಳಗೊಂಡ ಕುಂದಾಪುರ ತಾಲೂಕು ಪಂಚಾಯತ್ ಸಾಮಾನ್ಯ ಸಭೆ ಬುಧವಾರ ನಡೆಯಿತು.



ತಾಲೂಕು ಪಂಚಾಯತ್ನ ಉಪಾಧ್ಯಕ್ಷರಾದ ಕಿಶನ್ ಹೆಗ್ಡೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಾಮಾನ್ಯ ಸಭೆ ನಡೆಯಿತು. ಕುಂದಾಪುರದ ಸರ್ಕಾರಿ ಆಸ್ಪತ್ರೆಯನ್ನು ಸಂಪೂರ್ಣ ಸಾರ್ವಜನಿಕರ ಮುಕ್ತಗೊಳಿಸಬೇಕೆಂಬ ಆಗ್ರಹ ಬಲವಾಗಿ ಕೇಳಿ ಬಂತು. ಸದಸ್ಯ ಕರುಣ ಪೂಜಾರಿ ಮಾತನಾಡಿ ಕುಂದಾಪುರದ ಸರ್ಕಾರಿ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆ ಮಾಡಿರುವುದರಿಂದ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತದೆ. ಕೋಟಕ್ಕೆ ಹೋಗಲು ಸರಿಯಾದ ಬಸ್ ವ್ಯವಸ್ಥೆ ಇಲ್ಲ. ಅಲ್ಲಿ ಸರಿಯಾದ ಚಿಕಿತ್ಸೆಯೂ ಸಿಗುವುದಿಲ್ಲ.ಹಾಗಾಗಿ ಕುಂದಾಪುರದ ಸರ್ಕಾರಿ ಆಸ್ಪತ್ರೆಯನ್ನು ಸಂಪೂರ್ಣವಾಗಿ ಸಾರ್ವಜನಿಕರಿಗೆ ಮುಕ್ತಗೊಳಿಸಬೇಕು. ಕೋವಿಡ್ ಆಸ್ಪತ್ರೆ ಮಾಡಲು ಹಾಸ್ಟೆಲ್ಗಳನ್ನು ಬಳಸಿಕೊಳ್ಳಬಹುದು ಎಂದರು. ಇದಕ್ಕೆ ಸದಸ್ಯ ಸುರೇಂದ್ರ ಖಾರ್ವಿ ಧ್ವನಿಗೂಡಿಸಿದರು.
‘ಇದಕ್ಕೆ ಪ್ರತಿಕ್ರಿಯಿಸಿದ ಆಸ್ಪತ್ರೆಯ ಅಧಿಕಾರಿ, ಈಗ ಸರ್ಕಾರಿ ಆಸ್ಪತ್ರೆಯ ಜಿ.ಶಂಕರ್ ಹೆರಿಗೆ ವಾರ್ಡ್ ಮಾತ್ರ ಕೋವಿಡ್ ಚಿಕಿತ್ಸೆಗೆ ಬಳಸಿಕೊಳ್ಳಲಾಗುತ್ತಿದೆ. ಜುಲೈ 1ರಿಂದ ಹಳೆ ಕಟ್ಟಡದಲ್ಲಿ ಹೊರ ರೋಗಿಗಳ ವಿಭಾಗ ಆರಂಭವಾಗಿದೆ. ಫಿವರ್ ಕ್ಲಿನಿನ್ ಕಾರ್ಯನಿರ್ವಹಿಸುತ್ತಿದೆ. ತಾಲೂಕಿನ 10 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಫಿವರ್ ಕ್ಲಿನಿಕ್ ಆರಂಭಿಸಲಾಗಿದೆ. ಹಾಗೂ ಕೋವಿಡ್ ಆಸ್ಪತ್ರೆಗೆ ಪ್ರತ್ಯೇಕ ವೈದ್ಯರು ಹಾಗೂ ಸಿಬ್ಬಂದಿಗಳ ತಂಡ ಕಾರ್ಯನಿರ್ವಹಿಸುತ್ತದೆ. ಹಾಗಾಗಿ ರೋಗ ಹರಡುವ ಭಯ ಬೇಡ ಎಂದರು. ಸದಸ್ಯೆ ಜ್ಯೋತಿ ಪುತ್ರನ್ ಮಾತನಾಡಿ, ಕೊರೋನಾ ಪಾಸಿಟಿವ್ ಕಾಣಿಸಿಕೊಂಡರೆ ಅವರ ಮನೆಯನ್ನು ಸೀಲ್ಡೌನ್ ಮಾಡಲಾಗುತ್ತದೆ. ಆದರೆ ಆ ಮನೆಯವರಿಗೆ ಆಹಾರ ಪದಾರ್ಥಗಳನ್ನು ಸರಬರಾಜು ಮಾಡುವ ಕೆಲಸ ಆಗಬೇಕು. ಅಕ್ಕಿ ಕೊಟ್ಟ ಮಾತ್ರಕ್ಕೆ ಸಾಲದು. ಮನೆಗೆ ಸೀಲ್ಡೌನ್ ಮಾಡಿದ ಮೇಲೆ ಮನೆಯಿಂದ ಹೊರಗೆ ಹೋಗುವಂತಿಲ್ಲ. ಹಾಗಾದರೆ ಉಳಿದ ದಿನ ಬಳಕೆ ಸಾಮಾಗ್ರಿಗಳು ಆ ಕುಟುಂಬಕ್ಕೆ ಹೇಗೆ ತಲುಪಬೇಕು. ಅಧಿಕಾರಿಗಳು ಈ ಬಗ್ಗೆಯೂ ಆಲೋಚನೆ ಮಾಡಬೇಕು ಎಂದರು. ವಾಸುದೇವ ಪೈ ಇದಕ್ಕೆ ಧ್ವನಿ ಗೂಡಿಸಿದರು.
ಸದಸ್ಯ ಉದಯ ಪೂಜಾರಿ ಮಾತನಾಡಿ, ಚಿತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹೊರರಾಜ್ಯದಿಂದ ಬಂದವರು ಹೋಂ ಕ್ವಾರಂಟೈನ್ನಲ್ಲಿದ್ದಾರೆ. ಅಲ್ಲಿಗೆ ಯಾವ ಅಧಿಕಾರಿಗಳು ಈ ತನಕ ಭೇಟಿ ನೀಡಿಲ್ಲ. ಆಶಾ ಕಾರ್ಯಕರ್ತೆಯರು ಮುಷ್ಕರ ಮಾಡುತ್ತಿದ್ದಾರೆ. ಯಾರೂ ಕೂಡಾ ಇನ್ನೂ ಅಲ್ಲಿಗೆ ಭೇಟಿ ಮಾಡಿಲ್ಲ ಎಂದರು. ಇದಕ್ಕೆ ಉತ್ತರಿಸಿದ ತಹಶೀಲ್ದಾರ್ ಈ ಬಗ್ಗೆ ಮೇಲ್ವಿಚಾರಣೆ ನೋಡಿಕೊಳ್ಳಲು ಕುಂದಾಪುರ ತಾಲೂಕಿನಲ್ಲಿ ಮೂರು ಜನ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಗ್ರಾಮ ಪಂಚಾಯತ್ ಹಾಗೂ ವಿ.ಎಗಳು ಸೀಲ್ಡೌನ್ ಆದ ಸ್ಥಳಕ್ಕೆ ಭೇಟಿ ನೀಡಬೇಕು. 24 ಗಂಟೆಗೊಮ್ಮೆ ಪೋಟೋ ಅಪ್ಡೆಟ್ ಮಾಡಬೇಕು. ಈ ವಿಚಾರಿಸುವುದಾಗಿ ತಿಳಿಸಿದರು.
ಸದಸ್ಯೆ ಇಂದಿರಾ ಶೆಟ್ಟಿ ಮಾತನಾಡಿ ಸರ್ಕಾರ ಸಪ್ತಪದಿ ಕಾರ್ಯಕ್ರಮ ಇನ್ನೂ ಆರಂಭವಾಗದೇ ಇರುವುದರಿಂದ ಸಂಬಂಧಗಳು ತಪ್ಪಿ ಹೋಗುವ ಸಂಭವವಿದೆ . ಹಾಗಾಗಿ ಅತ್ಯಂತ ಸರಳವಾಗಿ ಅಲ್ಲಲ್ಲಿ ನಡೆಸುವುದು ಒಳಿತು ಎಂದರು.ಸುರೇಂದ್ರ ಖಾರ್ವಿ ಮಾತನಾಡಿ ಗಂಗೊಳ್ಳಿ ಚೋಳನಕೆರೆ ಒತ್ತುವರಿಯ ಬಗ್ಗೆ ಪ್ರಶ್ನೆ ಮಾಡುತ್ತಲೇ ಬಂದಿದ್ದೇನೆ. ಈ ಒತ್ತುವರಿಯ ಬಗ್ಗೆ ಪುನಃ ಸರ್ವೇ ಮಾಡಿ, ಒತ್ತವರಿ ತೆರವುಗೊಳಿಸಬೇಕು ಎಂದರು.ಜಿಲ್ಲಾ ಪಂಚಾಯತ್ನ ಬಿಲ್ ವಿಭಾಗದಲ್ಲಿ ತ್ವರಿತವಾಗಿ ಕೆಲಸ ಆಗುವುದಿಲ್ಲ. ಅಲ್ಲಿನ ಅಕೌಟೆಂಟ್ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಈ ಬಗ್ಗೆ ಸಿ.ಎಸ್ ಗೆ ಬರೆಯಬೇಕು ಎಂದು ಸದಸ್ಯರು ಆಗ್ರಹಿಸಿದರು. ಜ್ಯೋತಿ ಪುತ್ರನ್, ಉಮೇಶ ಶೆಟ್ಟಿ ಈ ಬಗ್ಗೆ ಸಭೆಯ ಗಮನ ಸಳೆದರು.
ಉಪಾಧ್ಯಕ್ಷ ಕಿಶನ್ ಹೆಗ್ಡೆ ಮಾತನಾಡಿ ಜಿಲ್ಲಾ ಪಂಚಾಯತ್ ನಲ್ಲಿ ನಡೆದ ಸಭೆಯಲ್ಲಿ ಮೂರು ತಾಲೂಕು ಪಂಚಾಯತ್ ಅಧ್ಯಕ್ಷರುಗಳು ಈ ಅಸಮಾಧಾನ ವ್ಯಕ್ತ ಪಡಿಸಿದ್ದೇವೆ ಎಂದರು.
ಉಮೇಶ ಶೆಟ್ಟಿ ಕಲ್ಗದ್ದೆ ಮಾತನಾಡಿ, ಕುಂದಾಪ್ರ ಕನ್ನಡ ದಿನಾಚರಣೆಯ ಸಂದರ್ಭ ರಕ್ತದಾನ ಶಿಬಿರಗಳನ್ನು ಕೆಲವೆಡೆ ಆಯೋಜಿಸಲಾಗಿದೆ. 20 ಜನರ ವ್ಯಾಪ್ತಿಯೊಳಗೆ ಕಾರ್ಯಕ್ರಮ ನಡೆಸಲು ಅನುಮತಿ ನೀಡಬೇಕು ಎಂದರು. ಪ.ಜಾತಿ ಪ.ಪಂಗಡದವರಿಗೆ ಸಿಗುವ ಪ್ರಮಾಣ ಪತ್ರಗಳು ಆರ್ಹರಿಗೆ ಸಿಗುವಂತಾಗಬೇಕು ಎಂದು ನಾರಾಯಣ ಕೆ.ಗುಜ್ಜಾಡಿ ತಿಳಿಸಿದರು.
ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ರೂಪಾ ಪೈ, ಕಾರ್ಯನಿರ್ವಹಣಾಧಿಕಾರಿ ಕೇಶವ ಶೆಟ್ಟಿಗಾರ್, ತಹಶೀಲ್ದಾರ್ ಆನಂದಪ್ಪ ನಾಯಕ್ ಉಪಸ್ಥಿತರಿದ್ದರು.