ಉಡುಪಿ, ಜು 16 (Daijiworld News/MSP): ಕೋವಿಡ್-19 ಉಡುಪಿ ಜಿಲ್ಲೆಯಲ್ಲಿ ಮತ್ತೊಂದು ಬಲಿ ಪಡೆದಿದೆ. ಬೈಂದೂರು ತಾಲೂಕಿನ ಮರವಂತೆಯ 54 ವರ್ಷದ ವ್ಯಕ್ತಿ ಕೊರೋನಾ ವೈರಸ್ನಿಂದ ಮೃತ ಪಟ್ಟಿದ್ದಾರೆ.

ಮರವಂತೆಯ ಈ ವ್ಯಕ್ತಿ ತೀವ್ರ ಅಸ್ತಮಾದಿಂದ ಬಳಲುತ್ತಿದ್ದು ಬುಧವಾರ ಸಂಜೆ ಅವರನ್ನು ಕುಂದಾಪುರ ಖಾಸಗಿ ಆಸ್ಪತ್ರೆಗೆ ಕರೆತರಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗ ಮದ್ಯೆ ಅವರು ಮೃತಪಟ್ಟಿದ್ದರು. ನಂತರ ಮೃತದೇಹವನ್ನು ಕುಂದಾಪುರಕ್ಕೆ ತಂದು ಸರಕಾರಿ ಆಸ್ಪತ್ರೆಯಲ್ಲಿ ಗಂಟಲು ದ್ರವ ಪರೀಕ್ಷೆ ನಡೆಸಲಾಗಿತ್ತು. ರ್ಯಾಪಿಡ್ ಟೆಸ್ಟ್ ಕಿಟ್ ಮೂಲಕ ಮಾದರಿ ಸಂಗ್ರಹಿಸಿದ್ದರಿಂದ ಶೀಘ್ರ ವರದಿ ಬಂದಿದ್ದು ಅದರಲ್ಲಿ ಮೃತ ವ್ಯಕ್ತಿಗೆ ಕೊರೋನಾ ಪಾಸಿಟಿವ್ ಇರುವುದು ದೃಢ ಪಟ್ಟಿದೆ.
ಮೃತ ವ್ಯಕ್ತಿಯ ಅಂತ್ಯಕ್ರಿಯೆಯನ್ನು ಗುರುವಾರ ಕುಂದಾಪುರದಲ್ಲಿ ಕೋವಿಡ್ ಮಾರ್ಗಸೂಚಿಯಂತೆ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಉಡುಪಿಯಲ್ಲಿಯೂ ಒಬ್ಬರು ಕೋವಿಡ್ನಿಂದ ಮೃತ ಪಟ್ಟಿದ್ದರು. ಇದರೊಂದಿಗೆ ಉಡುಪಿ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 7 ಕ್ಕೆ ಏರಿದೆ.