ಉಡುಪಿ, ಜು 16 (Daijiworld News/MSP): ಉಡುಪಿ ಜಿಲ್ಲಾ ಸೀಲ್ ಡೌನ್ನಿಂದಾಗಿ ಗಡಿಭಾಗದ ಜನರು ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವ ನೌಕರರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದು, ಜಿಲ್ಲಾಡಳಿತಕ್ಕೆ ಜನರು ಹಿಡಿಶಾಪ ಹಾಕುತ್ತಿರುವುದು ಉಡುಪಿ ಜಿಲ್ಲೆಯ ಗಡಿಭಾಗ ಹೆಜಮಾಡಿ ಚೆಕ್ ಪೋಸ್ಟ್ನಲ್ಲಿ ಗುರುವಾರ ಕಂಡುಬಂದಿದೆ.


ಜಿಲ್ಲಾಡಳಿತ ಉಡುಪಿ ಜಿಲ್ಲೆಯನ್ನು ಸಂಪೂರ್ಣ ಸೀಲ್ಡೌನ್ ಎಂದು ಷೋಷಿಸಿದೆ. ಆದರೆ ಕೆಲವೊಂದು ಮಾನದಂಡಗಳನ್ನು ಹೇಳಲು ಅದು ವಿಫಲವಾಗಿದೆ. ಅದರಲ್ಲಿಯೂ ಉಡುಪಿ ಜಿಲ್ಲೆಯ ಗಡಿಭಾಗದಲ್ಲಿರುವವರು ಮತ್ತು ಪಕ್ಕದ ಗ್ರಾಮಗಳಾದ ಮೂಲ್ಕಿ, ಕಾರ್ನಡು ಗ್ರಾಮಗಳಲ್ಲಿ ಕೃಷಿ ಕೆಲಸಗಳಲ್ಲಿ ತೊಡಗಿಸಿಕೊಳ್ಳುವವರು ತೀವ್ರ ಸಂಕಷ್ಟ ಅನುಭವಿಸುತಿದ್ದಾರೆ.
ಹೆಜಮಾಡಿ ಬಳಿಯ ನಡಿಕುದ್ರುವಿನಲ್ಲಿ ಕೃಷಿ ಕೆಲಸ ಮಾಡುತ್ತಿರುವ ಕೃಷಿಕರು ಹೆಜಮಾಡಿಯ ಗಡಿಭಾಗ ಮೂಲ್ಕಿಯಲ್ಲಿಯೂ ಕೃಷಿ ಮಾಡಬೇಕಿದೆ. ಮೂಲ್ಕಿಗೆ ಹೋಗಿ ವಾಪಾಸಾಗಲು ಗಡಿಯಲ್ಲಿರುವ ಪೊಲೀಸರು ಅನುಮತಿ ನೀಡುತ್ತಿಲ್ಲ. ಇದರಿಂದ ಅವರು ಸಂಕಷ್ಟ ಅನುಭವಿಸುತ್ತಿದ್ದಾರೆ.
ಈತನ್ಮದ್ಯೆ ಕೆಲವೊಂದು ಪ್ರಭಾವಿ ವ್ಯಕ್ತಿಗಳು ತಮ್ಮ ಪ್ರಭಾವ ಬಳಸಿ ಉಡುಪಿ ಕಡೆಗೆ ಬರುತ್ತಿರುವುದು ಕಂಡು ಬಂದಿದೆ. ಖಾಸಗಿ ಸಂಸ್ಥೆಗಳ ನೌಕರರು ತಮ್ಮ ಪರಿಚಯ ಪತ್ರ ವನ್ನು ತೋರಿಸಿದರೂ, ಪೊಲೀಸರು ಅವರನ್ನು ಒಳ ಬರಲು ಬಿಡುತ್ತಿಲ್ಲ. ಇದರಿಂದ ಪೊಲೀಸ್ ಅಧಿಕಾರಿಗಳು ಮತ್ತು ಜನರ ಮಧ್ಯೆ ವಾಗ್ವದ ಕಂಡು ಬಂದಿದೆ. ಪಡುಬಿದ್ರಿಯ ಖ್ಯಾತ ಹೋಟೆಲ್ ವಿಜಯಭವನ ಮತ್ತು ಉದಯ ಸಂಸ್ಥೆಯ ಉದಯ ಚಿಕನೆಸ್ಟ್ ಸಂಸ್ಥೆಯ ನೌಕರರಿಗೆ ಕೋವಿಡ್ ೧೯ ದೃಡ ಪಟ್ಟ ಹಿನ್ನೆಲೆಯಲ್ಲಿ ಎರಡೂ ಸಂಸ್ಥೆಗಳನ್ನು ಪಡುಬಿದ್ರಿ ಪೊಲೀಸದ ಸಮ್ಮುಖ ಪಡುಬಿದ್ರಿ ಗ್ರಾಮ ಪಂಚಾಯತ್ ಗ್ರಾಮಕರಣಿಕ ಹಾಗೂ ಪಿಡಿಓರವರು ಸೀಲ್ ಡೌನ್ ಮಾಡಿದರು. ಇದರಿಂದಾಗಿ ಪಡುಬಿದ್ರಿಯ ಜನರು ಆತಂಕಕ್ಕಿಡಾಗಿದ್ದು ಕಂಡುಬಂದಿದೆ.