ಬೆಳ್ತಂಗಡಿ, ಜು 16 (DaijiworldNews/PY): ವಿಪರೀತ ಮಳೆಯಿಂದ ಯಥೇಚ್ಛ ನೀರಿನ ಹರಿವಿನ ಕಾರಣದಿಂದ ಕುಸಿದ ರಸ್ತೆಯಲ್ಲಿ ಅಡಿಕೆ ಮರಗಳಿಂದ ಕಾಲುಸಂಕವನ್ನು ನಿರ್ಮಿಸಿ ನೂರಾರು ಜನರ ನಿತ್ಯದ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹೊಸಂಗಡಿ ವಲಯದ ವಿಪತ್ತು ನಿರ್ವಹಣೆ ಘಟಕದ ಸ್ವಯಂಸೇವಕರು ಸಾಮಾಜಿಕ ಕಳಕಳಿ ಮೆರೆದಿದ್ದಾರೆ.



ಸಂಯೋಜಕರಾದ ಜಯಶೀಲ ಉಮೇಶ್ ಇವರ ನೇತೃತ್ವದಲ್ಲಿ ಸ್ವಯಂಸೇವಕರಾದ ಜಯಂತ್ ಶೆಟ್ಟಿ, ಗುರುಪ್ರಸಾದ್, ಸಂತೋಷ್ ಕುಮಾರ್, ಅರುಣ್ ಹೆಗ್ಡೆ, ಪ್ರಶಾಂತ್, ರವೀಂದ್ರ ಇವರನ್ನು ಒಳಗೊಂಡ ಸ್ವಯಂಸೇವಕರ ತಂಡವು ಶ್ರಮದಾನ ನಡೆಸಿದ್ದಾರೆ.
ಅಂಗಾರಕರಿಯದಿಂದ ಆರಂಬೋಡಿಗೆ ಹೋಗುವ ರಸ್ತೆಯಲ್ಲಿ ಇರುವ ನೀರು ಹರಿಯುವ ಕಾಲುವೆಗೆ ಮೋರಿಯನ್ನು ನಿರ್ಮಿಸಿ( ಅಗಲವಾದ ಸಿಮೆಂಟ್ ಪೈಪ್ಗಳನ್ನು ಅಳವಡಿಸಿ) ಮಳೆಯ ನೀರು ಸರಾಗವಾಗಿ ಹರಿದು ಹೋಗುವಂತೆ ಸ್ಥಳೀಯ ಗ್ರಾಮ ಪಂಚಾಯತಿ ಮಳೆಗಾಲಕ್ಕೂ ಮುನ್ನ ವ್ಯವಸ್ಥೆ ಮಾಡಿದ್ದು, ಆದರೆ ಈ ಮೋರಿಯಲ್ಲಿ ವಿಪರೀತ ನೀರು ಹರಿದ ಪರಿಣಾಮ ಬ್ಲಾಕ್ ಆಗಿ ಮೋರಿಯ ಮೇಲೆ ತುಂಬಿದ ಮಣ್ಣು ಕೊಚ್ಚಿಕೊಂಡು ಹೋಗಿ ಸಂಚಾರಕ್ಕೆ ತೊಡಕಾಗಿ ಪರಿಣಮಿಸಿತ್ತು.
ಇದರಿಂದಾಗಿ ಅಲ್ಲಿನ ಜನರು ಬಹಳ ತೊಂದರೆ ಎದುರಿಸುವಂತಾಗಿತ್ತು. ವಾಹನ ಸಂಚಾರ, ಜನ ಸಂಚಾರಕ್ಕೆ ಅಸೌಕರ್ಯ ಉಂಟಾಗಿತ್ತು.
ಇಲ್ಲಿನ ಜನರು ಎದುರಿಸುತ್ತಿರುವ ತೊಂದರೆಯನ್ನು ಮನಗಂಡ ವಿಪತ್ತು ನಿರ್ವಹಣಾ ತಂಡದ ಸದಸ್ಯರು ಸ್ವಪ್ರೇರಣೆಯಿಂದ ತೋಡಿಗೆ ಕಾಲು ಸಂಕ ನಿರ್ಮಿಸಿದ್ದಾರೆ.
ತಾತ್ಕಾಲಿಕ ಸೇತುವೆ ನಿರ್ಮಾಣಕ್ಕೆ ಅಗತ್ಯವಿರುವ ಅಡಿಕೆ ಮರಗಳನ್ನು ಹೊಕ್ಕಾಡಿಗೋಳಿ ಒಕ್ಕೂಟದ ಅಧ್ಯಕ್ಷರಾದ ಸತೀಶ್ ಮಠ ಅವರು ಉಚಿತವಾಗಿ ನೀಡಿದ್ದರು. ಮರ ಕತ್ತರಿಸಲು ಅಗತ್ಯ ವಿರುವ ಕತ್ತರಿಸುವ ಯಂತ್ರ ವನ್ನು ಸ್ಥಳೀಯರಾದ ಮಜೀದ್ ಅವರು ನೀಡಿದ್ದಾರೆ. ಕೆಲಸ ನಿರ್ವಹಿಸಿದ ಸ್ವಯಂ ಸೇವಕರಿಗೆ ಉಪಾಹಾರ ದ ವ್ಯವಸ್ಥೆಯನ್ನು ಸ್ವಯಂಸೇವಕರಾದ ಗುರುಪ್ರಸಾದ್ ಅವರು ಉಚಿತವಾಗಿ ವ್ಯವಸ್ಥೆ ಮಾಡಿದ್ದಾರೆ. ಅಡುಗೆ ಮಾಡಿ ಬಡಿಸುವ ಸೇವೆಯನ್ನು ಸಂಪಾ ಜನಾರ್ದನ ಅವರು ನಿರ್ವಹಿಸಿದ್ದಾರೆ. ಕೆಲಸ ನಿರ್ವಹಿಸಲು ಅಗತ್ಯವಿರುವ ಗುದ್ದಲಿ, ಸಲಿಕೆ, ಪಿಕಾಸಿ, ಬುಟ್ಟಿ, ಹಗ್ಗ ಮುಂತಾದ ವಸ್ತುಗಳನ್ನು ಸ್ಥಳೀಯರು ಒದಗಿಸಿ ಸಹಕರಿಸಿದ್ದಾರೆ.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಪತ್ತು ನಿರ್ವಹಣಾ ಸ್ವಯಂಸೇವಕರ ಈ ಕಾರ್ಯ ಸುತ್ತಮುತ್ತಲಿನ ಜನರ ಮೆಚ್ಚುಗೆಗೆ ಪಾತ್ರವಾಗಿದೆ.