ಮಂಗಳೂರು, ಏ 14: ಬಿಜೆಪಿ ಅಧಿಕಾರದಲ್ಲಿದ್ದರೆ ಮಹಿಳೆಯರು, ಮಕ್ಕಳಿಗೆ ತೊಂದರೆ ಕಟ್ಟಿಟ್ಟ ಬುತ್ತಿ ಎಂದು ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಜಾನೆಟ್ ಡಿಸೋಜ ಟೀಕಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಅಧಿಕಾರದಲ್ಲಿ ಇರುವ ಎಲ್ಲ ಕಡೆಗಳಲ್ಲಿ ಮಹಿಳೆಯರು ತೊಂದರೆಯಲ್ಲಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಕಠುವಾದಲ್ಲಿ ಎಂಟು ವರ್ಷದ ಬಾಲಕಿ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ನಾಚಿಕೆಗೇಡಿನ ಸಂಗತಿ. ಮಾತ್ರವಲ್ಲ, ಉತ್ತರ ಪ್ರದೇಶದ ಉನ್ನಾವ್ನಲ್ಲಿ ಬಿಜೆಪಿ ಶಾಸಕನೇ ಯುವತಿ ಮೇಲೆ ಅತ್ಯಾಚಾರ ಎಸಗಿರುವ ಘಟನೆಗಳನ್ನು ಗಮನಿಸುವಾಗ ಬಿಜೆಪಿ ಅಧಿಕಾರದಲ್ಲಿ ಇರುವೆಡೆ ಮಹಿಳೆ, ಮಕ್ಕಳಿಗೆ ರಕ್ಷಣೆ ಇಲ್ಲ ಎಂಬುದನ್ನು ತೋರಿಸುತ್ತದೆ ಎಂದು ಹೇಳಿದರು.
ಏಪ್ರಿಲ್ 17ರಂದು ಈ ಕ್ರೂರ ಘಟನೆಗಳನ್ನು ಖಂಡಿಸಿ ದೇಶದಾದ್ಯಂತ ಕರಾಳ ದಿನ ಆಚರಿಸಲಾಗುವುದು. ಮೋಂಬತ್ತಿ ಬೆಳಗಿಸಿ ಪ್ರತಿಭಟಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭ ಕಾರ್ಪೋರೇಟರ್ ಅಪ್ಪಿ, ಮಮತ ಗಟ್ಟಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಎಸಿ ವಿನಯರಾಜ್ ಮೊದಲಾದವರು ಉಪಸ್ಥಿತರಿದ್ದರು.