ಕಾಸರಗೋಡು, ಏ16 : ಜಮ್ಮು ಕಾಶ್ಮೀರದ ಕತ್ವಾದಲ್ಲಿ ಎಂಟು ವರ್ಷದ ಬಾಲಕಿಯನ್ನು ಲೈಂಗಿಕ ದೌರ್ಜನ್ಯ ನಡೆಸಿ ಕೊಲೆಗೈದ ಕೃತ್ಯವನ್ನು ಖಂಡಿಸಿ ಕೇರಳದಲ್ಲಿ ಅಘೋಷಿತ ಹರತಾಳ ನಡೆಯುತ್ತಿದ್ದು , ಕಾಸರಗೋಡಿನಲ್ಲಿ ಬಂದ್ ಬಿಸಿ ಮುಟ್ಟಿದೆ. ಬಸ್ಸು , ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.
ಜನಪರ ಸಮಿತಿ ಹೆಸರಿನಲ್ಲಿ ಹರತಾಳ ನಡೆಯುತ್ತಿದೆ. ವಾಟ್ಸಾಪ್ ಸೇರಿದಂತೆ ಸಾಮಾಜಿಕ ಜಾಲ ತಾಣಗಳ ಮೂಲಕ ಪ್ರಚಾರ , ಸಂದೇಶ ರವಾನಿಸಿ ಹರತಾಳಕ್ಕೆ ಕರೆ ನೀಡಿದ್ದು , ಜನರಲ್ಲೂ ಗೊಂದಲ ಸೃಷ್ಟಿಸಿತ್ತು. ಆದರೆ ಇಂದು ಬೆಳಿಗ್ಗೆಯಿಂದ ಬಸ್ಸು ಸೇರಿದಂತೆ ವಾಹನಗಳು ರಸ್ತೆಗಿಳಿದಿಲ್ಲ . ಅಂಗಡಿ ಮುಂಗಟ್ಟುಗಳು ಮುಚ್ಚಿವೆ . ಹಲವೆಡೆ ಟಯರ್, ಕಲ್ಲು , ಮರದ ತುಂಡುಗಳನ್ನಿಟ್ಟು ರಸ್ತೆ ತಡೆ ನಡೆಸಲಾಗಿದೆ. ಉಪ್ಪಳದಲ್ಲಿ ನಿನ್ನೆ ರಾತ್ರಿ ಕೆ ಎಸ್ ಆರ್ ಟಿ ಸಿ ಬಸ್ಸೊಂದಕ್ಕೆ ಕಲ್ಲೆಸೆಯಲಾಗಿದೆ . ರಾಷ್ಟ್ರೀಯ ಹೆದ್ದಾರಿಯ ಮಂಜೇಶ್ವರ, ನಾಯಮ್ಮಾರಮೂಲೆ, ಎರಿಯಾಲ್, ಚೆರ್ಕಳ ಮೊದಲಾದೆಡೆ ವಾಹನಗಳನ್ನು ತಡೆದ ಘಟನೆ ನಡೆದಿದೆ .
ಈ ನಡುವೆ ವಾಹನಗಳನ್ನು ತಡೆಯಲೆತ್ನಿಸಿದ ೨೫ ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ . ಹಲವು ಬೈಕ್ ಮತ್ತು ಆಟೋಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಭಾನುವಾರ ಸಂಜೆಯಿಂದ ನಾಳೆ ಕೇರಳ ಬಂದ್ ಎಂಬ ಸಂದೇಶ ಹರಿದಾಡುತ್ತಿದ್ದು ಇದರಲ್ಲಿ ಯಾವುದೇ ಸಂಘಟನೆ , ಪಕ್ಷ ವನ್ನು ಉಲ್ಲೇಖಿಸಿರಲಿಲ್ಲ. ಆದರೆ ಈ ಸಂದೇಶವನ್ನು ಪೊಲೀಸರು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಆದರೆ ಇಂದು ಬೆಳಿಗ್ಗೆಯಿಂದ ಸಂಪೂರ್ಣ ಬಂದ್ ವಾತಾವರಣ ಹಾಗೂ ಹಲವೆಡೆ ವಾಹನಗಳನ್ನು ತಡೆದಾಗ ಪೊಲೀಸರು ಎಚ್ಚರಗೊಂಡಿದ್ದು , ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಂಡಿದ್ದಾರೆ