ಮಂಗಳೂರು, ಜು 19 (DaijiworldNews/PY): ಸೌದಿ ಅರೇಬಿಯಾದಿಂದ ಊರಿಗೆ ಆಗಮಿಸಿ ಕ್ವಾರಂಟೈನ್ನಲ್ಲಿದ್ದ ಮಹಿಳೆಯೋರ್ವರ ಕೊರೊನಾ ಪರೀಕ್ಷಾ ವರದಿಯಲ್ಲಿ ಗೊಂದಲವುಂಟಾಗಿ, ಮನೆಯವರು ಆತಂಕಗೊಂಡಿರುವ ಘಟನೆ ತಿಳಿದುಬಂದಿದೆ.

ಅಡ್ಯಾರ್ ಪಂಚಾಯತ್ ವ್ಯಾಪ್ತಿಯ ವಳಚ್ಚಿಲ್ ಪದವು ನಿವಾಸಿ ಸುಮಾರು 30 ವರ್ಷದ ಆರು ತಿಂಗಳ ಗರ್ಭಿಣಿ ಪತಿಯೊಂದಿಗೆ ಸೌದಿ ಅರೇಬಿಯಾದಲ್ಲಿ ವಾಸವಾಗಿದ್ದರು. ಸೌದಿ ಅರೇಬಿಯಾದ ತನ್ನ ಎರಡು ವರ್ಷದ ಮಗನೊಂದಿಗೆ ಜುಲೈ 14ರಂದು ಮಂಗಳೂರಿಗೆ ಬಂದಿದ್ದ ಆಕೆ ನಗರದ ಲಾಡ್ಜ್ವೊಂದರಲ್ಲಿ ಕ್ವಾರಂಟೈನ್ಗೆ ಒಳಗಾಗಿದ್ದರು.
ಜುಲೈ 15 ರಂದು ತಾಯಿ ಹಾಗೂ ಮಗನ ಗಂಟಲಿನ ದ್ರವದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಪ್ರಯೋಗಾಲಯಕ್ಕೆ ಕಳುಹಿಸಲಾತ್ತು. ಜುಲೈ 18ರಂದು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ, ಅಡ್ಯಾರ್ ಗ್ರಾಮ ಪಂಚಾಯತ್ನ ಗ್ರಾಮ ಕರಣಿಕರಿಂದ ಹಾಗೂ ಮಂಗಳೂರು ತಾಲೂಕು ಆರೋಗ್ಯ ಕೇಂದ್ರದಿಂದ ಮಹಿಳೆಗೆ ಪ್ರತ್ಯೇಕ ಕರೆಗಳು ಬಂದಿದ್ದು, ನಿಮಗೆ ಕೊರೊನಾ ಪಾಸಿಟಿವ್ ಇದೆ ಎಂದು ಹೇಳಲಾಗಿತ್ತು. ಮೂರು ಜನರಿಂದ ಬಂದ ಕರೆಗಳಿಂದಾಗಿ ಮಹಿಳೆ ತೀವ್ರವಾಗಿ ಆತಂಕಕ್ಕೊಳಗಾಗಿದ್ದು, ಅಲ್ಲದೇ, ಅವರು ನೀರು, ಆಹಾರ ಸೇವಿಸದೇ ಕಂಗಾಲಾಗಿದ್ದರು.
ಆದರೆ, ಜುಲೈ 18 ರ ಸಂಜೆಯ ವೇಳೆ ದೊರಕಿದ ಪ್ರಯೋಗಾಲಯದ ವರದಿಯಲ್ಲಿ ಮಹಿಳೆಗೆ ನೆಗೆಟಿವ್ ಎಂದು ತೋರಿಸಲಾಗಿದೆ. ಈ ಗೊಂದಲದಿಂದಾಗಿ ಮಹಿಳೆ ಹಾಗೂ ಆಕೆಯ ಮನೆಯವರು ಮತ್ತೆ ಆತಂಕಕ್ಕೊಳಗಾಗಿದ್ದಾರೆ.
ಜುಲೈ 18 ರ ಶನಿವಾರ ಜಿಲ್ಲಾ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಆರೋಗ್ಯ ಬುಲೆಟಿನ್ನಲ್ಲಿ, ಈ ಮಹಿಳೆಗೆ ಕೊರೊನಾ ಪಾಸಿಟಿವ್ಮ ಇದೆ ಎಂದು ತಿಳಿಸಲಾಗಿತ್ತು. ಆದರೆ, ಶನಿವಾರ ಬಂದ ಪ್ರಯೋಗಾಲಯದ ವರದಿಯಲ್ಲಿ ಆಕೆಗೆ ಕೊರೊನಾ ನೆಗೆಟಿವ್ ಎಂದು ತೋರಿಸಲಾಗಿತ್ತು. ಯಾವುದನ್ನು ನಂಬಬೇಕು ಎಂದು ತಿಳಿಯದಾಗಿದ್ದು, ಪೇಚಿಗೆ ಸಿಲುಕಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಮಹಿಳೆಯ ಸಹೋದರ ಮುಹಮ್ಮದ್ ಇಕ್ಬಾಲ್, ಆರೋಗ್ಯ ಇಲಾಖೆಯ ವರದಿಯಿಂದಾಗಿ ನಾವು ಗೊಂದಲಕ್ಕೊಳಗಾಗಿದ್ದೇವೆ. ನಾವು ಕೊರೊನಾ ಲ್ಯಾಬ್ಯನ್ನು ನಂಬಬೇಕೋ ಅಥವಾ ಆರೋಗ್ಯ ಇಲಾಖೆ ನೀಡಿದ ವರದಿಯನ್ನು ನಂಬಬೇಕೋ ಎಂದು ನಮಗೆ ತಿಳಿದಿಲ್ಲ. ಈ ಬಗ್ಗೆ ಸ್ಪಷ್ಟನೆ ನೀಡುವಂತೆ ನಾನು ಆರೋಗ್ಯ ಇಲಾಖೆಗೆ ಮನವಿ ಮಾಡಿದ್ದೇನೆ ಎಂದಿದ್ದಾರೆ.
ಈ ಕುರಿತು ಮಾತನಾಡಿದ ಅಡ್ಯಾರ್ ಗ್ರಾಮ ಪಂಚಾಯಿತಿಯ ಗ್ರಾಮ ಲೆಕ್ಕಾಧಿಕಾರಿ, ನಾವು ಈ ವಿಷಯದಲ್ಲಿ ನಮ್ಮದು ಯಾವುದೇ ದೋಷವಿಲ್ಲ. ಆರೋಗ್ಯ ಇಲಾಖೆಯ ಬುಲೆಟಿನ್ ವರದಿಯನ್ನು ಆಧರಿಸಿ ನಾವು ಮನೆಯನ್ನು ಸೀಲ್ ಮಾಡಲು ಸಿದ್ದವಾಗಿದ್ದೆವು. ಆದರೆ, ಆ ಮಹಿಳೆ ವಿದೇಶದಿಂದ ಆಗಮಿಸಿ ಲಾಡ್ಜ್ನಲ್ಲಿ ಕ್ವಾರಂಟೈನ್ನಲ್ಲಿ ಇರುವ ಬಗ್ಗೆ ತಿಳಿದ ಕಾರಣ ಸೀಲ್ಡೌನ್ ಮಾಡುವ ತೀರ್ಮಾನವನ್ನು ಕೈಬಿಡಲಾಯಿತು. ಮಹಿಳೆಗೆ ಕೊರೊನಾ ನೆಗೆಟಿವ್ ಬಂದಿರುವ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ಈ ವಿಷಯವನ್ನು ನಾವು ಮೇಲಾಧಿಕಾರಿಗಳ ಗಮನಕ್ಕೆ ತರುತ್ತೇವೆ ಎಂದು ಹೇಳಿದ್ದಾರೆ.
ಬಳಿಕ ಈ ವಿಷಯವನ್ನು ಬಗೆಹರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಲ್ಯಾಬ್ ವರದಿಯನ್ನು ಅಧಿಕಾರಿಗಳಿಗೆ ತೋರಿಸಿದ ಬಳಿಕ ಮಹಿಳೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿಲ್ಲ. ಹಾಗೂ ಆಕೆಗೆ ಕೊರೊನಾ ನೆಗೆಟಿವ್ ಎಂದು ದೃಢಪಡಿಸಲಾಗಿದೆ.