ಉಡುಪಿ, ಜು.19 (DaijiworldNews/MB) : ಕಸ್ತೂರ್ಬಾ ಆಸ್ಪತ್ರೆ ಮಣಿಪಾಲವು ತನ್ನ ರೋಗಿಗಳ ಅನುಕೂಲಕ್ಕಾಗಿ ವೀಡಿಯೋ ಸಮಾಲೋಚನೆ ಸೇವಾ ಸೌಲಭ್ಯವನ್ನು ಪರಿಚಯಿಸುತ್ತಿದೆ.


ಕಸ್ತೂರ್ಬಾ ಆಸ್ಪತ್ರೆ ಮಣಿಪಾಲವು 20 ನೇ ಜುಲೈ 2020 ಸೋಮವಾರದಿಂದ ಜಾರಿಗೆ ಬರುವಂತೆ ರೋಗಿಗಳ ಅನುಕೂಲಕ್ಕಾಗಿ, ನಾವು ವೀಡಿಯೋ ಸಮಾಲೋಚನೆ ಸೇವೆಯನ್ನು ಪ್ರಾರಂಭಿಸುತ್ತಿದ್ದೇವೆ ಎಂದು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ಅವಿನಾಶ ಶೆಟ್ಟಿ ಪ್ರಕಟಿಸಿದ್ದಾರೆ.
ಕೊರೊನಾ ವೈರಸ್ (ಕೋವಿಡ್ - 19) ಹರಡುವುದನ್ನು ನಿಯಂತ್ರಿಸುವ ಸಲುವಾಗಿ ಹಲವು ನಿರ್ಬಂಧಗಳಿರುವುದರಿಂದ, ನಮ್ಮ ಹೆಚ್ಚಿನ ರೋಗಿಗಳು ವೈದ್ಯರೊಂದಿಗೆ ಸಮಯೋಚಿತ ಸಮಾಲೋಚನೆ ಮತ್ತು ಮರು ಸಮಾಲೋಚನೆಯಿಂದ ವಂಚಿತರಾಗಿದ್ದಾರೆ. ಈ ಸಂಗತಿಯನ್ನು ಅರಿತುಕೊಂಡು, ನಮ್ಮ ರೋಗಿಗಳಿಗೆ ಸಮಾಲೋಚನೆ ಮತ್ತು ಮರು ಸಮಾಲೋಚನೆಯನ್ನು ನೀಡುವುದನ್ನು ವೀಡಿಯೋ ಸಮಾಲೋಚನೆ ಸೇವೆಗಳ ಮೂಲಕ ಮಾಡಲು ಕಸ್ತೂರ್ಬಾ ಆಸ್ಪತ್ರೆಯ ಆಡಳಿತ ಮಂಡಳಿ ನಿರ್ಧರಿಸಿದೆ.
ತಮ್ಮ ರೋಗಿಗಳ ಉತ್ತಮ ಸೇವೆಗಾಗಿ ಮತ್ತು ಯಾವುದೇ ಸಮಯದಲ್ಲಿ, ಎಲ್ಲಿಯಾದರೂ ಮತ್ತು ಯಾವುದೇ ಸಾಧನದಲ್ಲಿ ಸಮಾಲೋಚನೆಗಳನ್ನು ಒದಗಿಸಲು ಮೈ ಟೆಲಿ ಒಪಿಡಿ ಅಥವಾ ವೀಡಿಯೋ ಸಮಾಲೋಚನೆ ಒಂದು ಪ್ರಬಲ ಸಾಧನ. ವೈದ್ಯರು ಮತ್ತು ರೋಗಿಗಳು ಈಗ ಟೆಲಿಮೆಡಿಸಿನ್ ಅಥವಾ ವೀಡಿಯೋ ಸಮಾಲೋಚನೆಯನ್ನು ಅ್ಯಪ್ ಡೌನ್ಲೋಡ್ ಮಾಡದೆ ಬಳಸಬಹುದು, ಏಕೆಂದರೆ ಇದು ಎಲ್ಲಾ ಫೋನ್ಗಳಲ್ಲಿ ನೇರವಾಗಿ ಕಾರ್ಯನಿರ್ವಹಿಸುತ್ತದೆ. ಮೈ ಟೆಲಿ ಒಪಿಡಿ ಅಥವಾ ವೀಡಿಯೋ ಸಮಾಲೋಚನೆಯು ಒದಗಿಸುವ ಸೇವೆಗಳು ವೈದ್ಯರು ತಮ್ಮ ರೋಗಿಗಳಿಗೆ ತಮ್ಮ ಮನೆಗಳ ಸೌಕರ್ಯದಿಂದ ನೇರವಾಗಿ ಸಂಪರ್ಕದಲ್ಲಿರಲು ಅನುವು ಮಾಡಿಕೊಡುತ್ತದೆ.
ಈ ಸೇವೆಯಡಿಯಲ್ಲಿ ಜನರು ತಮ್ಮ ಮನೆಯಲ್ಲಿ ಕುಳಿತು ವೈದ್ಯರನ್ನು ಸಂಪರ್ಕಿಸಬಹುದು. ವೈದ್ಯರು ದೂರವಾಣಿ ಮೂಲಕ ಅಥವಾ ವೀಡಿಯೋ ಕರೆ ಮೂಲಕ ಸಮಾಲೋಚನೆ ಮತ್ತು ವೈದ್ಯಕೀಯ ಸಲಹೆಯನ್ನು ನೀಡಲಿದ್ದಾರೆ. ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ 9.00 ರಿಂದ ಸಂಜೆ 4.00 ರವರೆಗೆ ದೂರವಾಣಿ ಕರೆ ಮಾಡುವುದರ ಮೂಲಕ ಎಲ್ಲಾ ವಿಭಾಗದ ವೈದ್ಯರನ್ನು ಸಂಪರ್ಕಿಸಬಹುದು. ಸಂಪರ್ಕಿಸಲು 080 47192235ಗೆ ಕರೆ ಮಾಡಬೇಕಾಗಿ ವಿನಂತಿ. ಆದಾಗ್ಯೂ ಅಪಘಾತ ಮತ್ತು ತುರ್ತು ಚಿಕಿತ್ಸಾ ಸೇವೆಗಳು ಎಂದಿನಂತೆ 24X7 ಕಾರ್ಯನಿರ್ವಹಿಸಲಿದೆ.