ಉಡುಪಿ, ಜು 19 (DaijiworldNews/PY): ಶ್ರೀಶಿರೂರುಮಠದ ಕೀರ್ತಿಶೇಷ ಶ್ರೀಲಕ್ಷ್ಮೀವರತೀರ್ಥ ಶ್ರೀಪಾದರ 2ನೇ ವರ್ಷದ ಪುಣ್ಯಸ್ಮರಣೆಯನ್ನು ನಾಡಿನ ವಿವಿಧ ಸ್ಥಳಗಳಲ್ಲಿ ಆಚರಿಸಲಾಯಿತು.





ದಕ್ಷಿಣಕನ್ನಡ ಜಿಲ್ಲೆಯ ಕೇಮಾರಿನಲ್ಲಿ ಶ್ರೀಸಾಂದಿಪನಿ ಮಠದ ಶ್ರೀಈಶ ವಿಠಲದಾಸ ಸ್ವಾಮೀಜಿಯವರು ತಮ್ಮ ಮಠದಲ್ಲಿ ಶ್ರೀವರದನಾರಾಯಣ, ಮೂಕಾಂಬಿಕಾ ಹಾಗೂ ಶಾಲಗ್ರಾಮ ಸನ್ನಿಧಿಗೆ ವಿಶೇಷ ಅಭಿಷೇಕ ಹಾಗೂ ಮಹಾಪೂಜೆ ಸಲ್ಲಿಸಿ, ನಂತರ ಶ್ರೀಲಕ್ಷ್ಮೀವರತೀರ್ಥ ಶ್ರೀಪಾದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನುಡಿನಮನ ಸಲ್ಲಿಸಲಾಯಿತು.
ಕಿರಿ ಮಂಜೇಶ್ವರದ ಹೊಸಹಿತ್ಲು ಸಮುದ್ರ ಕಿನಾರೆಯಲ್ಲಿ ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷರಾದ ಉದಯ್ ಎಂ ಶ್ರೀಯಾನ್, ಕೋಶಾಧಿಕಾರಿ ವೆಂಕಟೇಶ ಪೂಜಾರಿ, ನಿಕಟಪೂರ್ವ ಅಧ್ಯಕ್ಷ ವಿಜಯ್ ಎಂ ಚಂದ್ರನ್ ಹಾಗೂ ಊರಿನವರು ಶ್ರೀಶಿರೂರು ಶ್ರೀಪಾದರ ಸ್ಮರಣಾರ್ಥ ಗಿಡ ನೆಡುವ ಕಾರ್ಯಕ್ರಮ ಆಯೋಜಿಸಿದ್ದರು.
ಉಡುಪಿಯ ಪರಿಯಾಳ ಸಮುದಾಯದ ಜಿಲ್ಲಾ ಪ.ಸ.ಸು.ಸಂಘದ ವತಿಯಿಂದ ಸದಸ್ಯರು ನಮನಗಳನ್ನು ಅರ್ಪಿಸಿದರು.
ಉಡುಪಿಯಲ್ಲಿ ಶಿರೂರು ಮಠದ ಶ್ರೀಲಕ್ಷ್ಮೀವರತೀರ್ಥರ ಪೂರ್ವಾಶ್ರಮದ ಸಹೋದರರು ಮತ್ತು ಬಂಧುಗಳು ತಮ್ಮ ವಠಾರದಲ್ಲಿ ಶ್ರೀಪಾದರ ಭಾವ ಚಿತ್ರಕ್ಕೆ ದೀಪ ಬೆಳಗಿಸಿ ಪುಷ್ಪಾರ್ಚನೆ ನಡೆಸಿ ಪುಣ್ಯಸ್ಮರಣೆಗೈದು ಪುಣ್ಯ ದಿನವನ್ನು ಆಚರಿಸಿದರು. ಅಷ್ಟೇ ಅಲ್ಲದೆ ಶಿರೂರು ಅಭಿಮಾನಿ ಬಳಗದ ಸದಸ್ಯರು ಹಾಗೂ ನಾಡಿನಾದ್ಯಂತ ಶ್ರೀಪಾದರ ಬಹುತೇಕ ಶಿಷ್ಯವೃಂದದವರು ಭಾನುವಾರದ ಲಾಕ ಡೌನ್ ನಿಮಿತ್ತ ಸ್ವಗೃಹದಲ್ಲೇ ಕುಟುಂಬಿಕರು ಹಾಗೂ ಸ್ನೇಹಿತರ ಜೊತೆ ಸೇರಿ ಶ್ರೀಪಾದರ ಪುಣ್ಯಸ್ಮರಣೆಯನ್ನು ಆಚರಿಸಿದರು.
ಮುಂಬೈನ ವಿ. ಮೋಹನ್ ಮತ್ತು ಕುಟುಂಬಿಕರು ಮುಂಬೈಯಲ್ಲಿನ ತಮ್ಮ ಬಂಧುಮಿತ್ರರ ಜೊತೆ ಸೇರಿ ಪುಷ್ಪ ನಮನ ಸಲ್ಲಿಸಿದರು. ಬೆಂಗಳೂರಿನ ಶ್ರೀಕೃಷ್ಣ ಟೂರ್ಸ್ ಆಂಡ್ ಟ್ರಾವೆಲ್ಸ್ ನ ಶ್ರೀನವೀನ ಅವರಿಂದ ಸ್ವಗೃಹದಲ್ಲಿ ವಿಶೇಷ ಪುಷ್ಪಾರ್ಚನೆ ಕಾರ್ಯಕ್ರಮ ಜರಗಿತು.