ಬೆಳ್ತಂಗಡಿ, ಜು 19 (DaijiworldNews/PY): ಸ್ವಿಫ್ಟ್ ಕಾರೊಂದು ಮಳೆ ಹಾಗೂ ಮಂಜಿನ ಕಾರಣದಿಂದ ದಾರಿ ಕಾಣದಾಗಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಜುಲೈ 18ರ ಶನಿವಾರ ರಾತ್ರಿ ಚಾರ್ಮಾಡಿ ಘಾಟಿಯ 9ನೇ ತಿರುವಿನಲ್ಲಿ ನಡೆದಿದೆ.

ಕಾರು ಪಲ್ಟಿಯಾದ ಪರಿಣಾಮ ಕಾರಿನ ಚಾಲಕ ಮೂಡಿಗೆರೆ ನಿವಾಸಿ ಸುಹೇಲ್(38) ಯಾನೆ ಬಬ್ಲು ಗಂಭೀರವಾಗಿ ಗಾಯಗೊಂಡಿದ್ದಾರೆ.
ಅಪಘಾತ ಸಂಭವಿಸಿದ ಬಳಿಕ ಸುಮಾರು ಒಂದೂವರೆ ಗಂಟೆಗಳ ಕಾಲ ಗಾಯಾಳು ಚಾಲಕ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಾರಲ್ಲೇ ಬಿದ್ದಿದ್ದರು ಎನ್ನಲಾಗಿದೆ. ಕಾನೂನು ಮೀರಿ ಸಂಜೆಯಾದ ಬಳಿಕ ಚಾರ್ಮಾಡಿ ಘಾಟಿರಸ್ತೆಯ ಮೂಲಕ ಬಂದ ಈ ಕಾರಿನ ಚಾಲಕ ತಾನೇ ಅಪಾಯವನ್ನು ಆಹ್ವಾನಿಸಿಕೊಂಡಂತಿತ್ತು. ಗಂಭಿರವಾಗಿ ಗಾಯಗೊಂಡಿದ್ದ ಕಾರಿನ ಚಾಲಕನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ತೀರಾ ದುರಸ್ಥಿ ಮತ್ತು ಅಪಾಯಕಾರಿಯಾಗಿರುವ ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಸಂಜೆಯ ಬಳಿಕ ವಾಹನ ಸಂಚಾರ ನಿಷೇಧಿಸಿ ಚಿಕ್ಕಮಗಳೂರು ಜಿಲ್ಲಾಧಿಕಾರಿ ಈಗಾಗಲೇ ಆದೇಶ ಹೊರಡಿಸಿದ್ದರೂ, ಈ ಶಿಫ್ಟ್ ಕಾರು ಕೊಟ್ಟಿಗೆಹಾರ ಚೆಕ್ಪೋಸ್ಟ್ ದಾಟಿ ಹೇಗೆ ಬಂತು? ಎಂಬ ಪ್ರಶ್ನೆ ಮೂಡಿದೆ.