ಮಂಗಳೂರು, ಏ 16: ದೇಶದಲ್ಲಿ ಅನೇಕ ಹೆಣ್ಣು ಮಕ್ಕಳು ಅತ್ಯಾಚಾರದಂತಹ ನೀಚ ಕೃತ್ಯಕ್ಕೆ ಬಲಿಯಾಗುತ್ತಿದ್ದಾರೆ ಎಂದು ಕಾರ್ಪೋರೇಟರ್ ಪ್ರತಿಭಾ ಕುಳಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಉತ್ತರ ಪ್ರದೇಶದ ಉನ್ನಾವೋ ಹಾಗೂ ಜಮ್ಮು ಕಾಶ್ಮೀರದ ಕಥುವಾ ಪ್ರದೇಶದಲ್ಲಿ ನಡೆದ ಅತ್ಯಾಚಾರ ಪ್ರಕರಣವನ್ನು ಗಮನಿಸುವಾಗ, ನನಗೆ ನನ್ನನ್ನು ಭಾರತೀಯ ಮಹಿಳೆ ಎಂದು ಹೇಳಲು ನಾಚಿಕೆಯಾಗುತ್ತಿದೆ. ದೇಶದಲ್ಲಿ ಅತ್ಯಾಚಾರದಂತಹ ಕೃತ್ಯಗಳು ಹೆಚ್ಚಾಗುತ್ತಿದೆ. ಅನೇಕ ಹೆಣ್ಣುಮಕ್ಕಳು ಇದಕ್ಕೆ ಬಲಿಯಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಜಮ್ಮು-ಕಾಶ್ಮೀರದ ಕಥುವಾದಲ್ಲಿ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣವನ್ನು ತೀವ್ರವಾಗಿ ಖಂಡಿಸಿದ ಅವರು, ಸಂತ್ರಸ್ತ ಬಾಲಕಿಯ ಹೆಸರನ್ನು ನನ್ನ ಮಗಳ ಹೆಸರಾದ ಪೃಥ್ವಿ ಜತೆ ಸೇರಿಸಿ ಕರೆಯುತ್ತೇನೆ. ನಾನು ಒಬ್ಬ ಹಿಂದೂ. ಆದರೆ ಬಿಜೆಪಿ ಪಕ್ಷದ ಹಿಂದೂ ಅಲ್ಲ. ವಿಶ್ವದಲ್ಲಿ ಇರುವುದು ಕೇವಲ ಎರಡೇ ಜಾತಿ. ಒಂದು ಹೆಣ್ಣು, ಮತ್ತೊಂದು ಗಂಡು. ನನಗೆ, ನಮಗೆ ಖಂಡಿತಾ ಯಾವುದೇ ಜಾತಿ ಇಲ್ಲ. ನಾನು ಹಿಂದೂ ಆಗಿದ್ದರೂ ಬಿಜೆಪಿಯಲ್ಲಿರುವ ಹಿಂದೂಗಳ ಎದುರು ನಾನೂ ಹಿಂದೂ ಎಂದು ಹೇಳಿಕೊಳ್ಳಲು ನಾಚಿಕೆ ಪಡುವ ಪರಿಸ್ಥಿತಿ ಎದುರಾಗಿದೆ ಎಂದು ಹೇಳಿದರು.
ಈ ದೇಶದಲ್ಲಿ ಭಾರತಮಾತೆ, ಭಾರತ ಮಾತೆ ಅನ್ನುವವರು ಮಹಿಳೆಯರಿಗೆ ಯಾವುದೇ ರಕ್ಷಣೆಯನ್ನು ಕೊಡುತ್ತಿಲ್ಲ. ಇದಕ್ಕೆ ಸಾಕ್ಷಿ, ಸ್ವತಃ ನಾನೇ ಹಿಂಸೆ ಅನುಭವಿಸಿರುವುದು. ನಿಮಗೆ ನಿಜವಾಗಿ ಯಾರೂ ರಕ್ಷಣೆ ಕೊಡುತ್ತಾರೆಯೋ ಅವರಿಗೆ ನಿಮ್ಮ ಅಮೂಲ್ಯ ಮತ ನೀಡಿ ಎಂದು ಹೇಳಿದ್ದಾರೆ.
ಮೋದಿ ಭೇಟಿ ಬಚಾವೋ ಅನ್ನುತ್ತಾರೆ. ಆದರೆ ಮೋದಿ ತಮ್ಮ ಪತ್ನಿಗೆ ಹಿಂಸೆ ಕೊಟ್ಟಿದ್ದಾರೆ. ಮಾತ್ರವಲ್ಲ, ಪತ್ನಿಯನ್ನೇ ತನ್ನಿಂದ ದೂರ ಇಟ್ಟಿದ್ದಾರೆ. ಉತ್ತರ ಪ್ರದೇಶದ ಸಿಎಂ ಯೋಗಿ ಅವರು ಜೋಗಿಯಾಗಿದ್ದಾರೆ. ಮೋದಿ ಮತ್ತು ಯೋಗಿಗೆ ಹೆಣ್ಮಕ್ಕಳ ನೋವು ಅರ್ಥವಾಗಲ್ಲ ಎಂದು ಹೇಳಿದ್ದಾರೆ.
ಸೋ ಕಾಲ್ಡ್ ಬಿಜೆಪಿ ಹಿಂದೂಗಳಿಂದ ಕಿರುಕುಳ ಹೆಚ್ಚಾಗುತ್ತಿದೆ. ನನ್ನ ಮನೆ ಎದುರು ಸೋ ಕಾಲ್ಡ್ ಬಿಜೆಪಿ ಹಿಂದೂ ಕಾರ್ಯಕರ್ತರು ದಾಂಧಲೆ ನಡೆಸಿದ್ದಾರೆ ಎಂದು ಆರೋಪಿಸಿದ ಅವರು ಮನೆ ಎದುರು ದಾಂಧಲೆ ನಡೆಸಿದ ಕೆಲವೊಂದು ವಿಡಿಯೋ ತುಣುಕನ್ನು ಪ್ರದರ್ಶಿಸಿದ್ದಾರೆ.