ಕುಂದಾಪುರ, ಜು 20 (Daijiworld News/MSP): ಕೋವಿಡ್-19ನಿಂದಾಗಿ ಇತಿಹಾಸದಲ್ಲಿಯೇ ಮೊದಲು ಎನ್ನುವಂತೆ ಕರ್ಕಾಟಕ ಅಮಾವಾಸ್ಯೆ ಮರವಂತೆ ಶ್ರೀ ವರಾಹ ಸ್ವಾಮಿ ಜಾತ್ರೆ, ಸಮುದ್ರ ಸ್ನಾನ ನಡೆಯಲಿಲ್ಲ.

































ಜುಲೈ 20 ಆಟಿ ಅಮಾವಾಸ್ಯೆ. ಇವತ್ತು ಮರವಂತೆ ಪುರಾಣ ಪ್ರಸಿದ್ದ ವರಹಾ ಸ್ವಾಮಿ ಜಾತ್ರೆ ನಡೆಯಬೇಕಿತ್ತು. ಈ ಬಾರಿ ಕೊರೋನಾದಿಂದಾಗಿ ಮರವಂತೆ ಜಾತ್ರೆ ನಡೆಯುವುದಿಲ್ಲ ಎನ್ನುವುದರ ಬಗ್ಗೆ ಸಾಕಷ್ಟು ದಿನಗಳ ಹಿಂದೆಯೇ ಜಿಲ್ಲಾಡಳಿತದ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಲಾಗಿತ್ತು. ಹಾಗಾಗಿ ಭಕ್ತರು ಮರವಂತೆಗೆ ಆಗಮಿಸಲಿಲ್ಲ.ಹೀಗಾಗಿ ಅಟ ಅಮಾವಾಸ್ಯೆ ದಿನ ಜನಜಂಗುಳಿಯಿಂದ ತುಂಬಿರಬೇಕಾದ ಮರವಂತೆ ನಿಶ್ಯಬ್ದವಾಗಿತ್ತು. ಬೆರಳೆಣಿಕೆಯ ಜನರಷ್ಟೆ ತಿರುಗಾಡುತ್ತಿದ್ದರು. ಸಮುದ್ರ ಸ್ನಾನಕ್ಕೂ ಅವಕಾಶ ಕಲ್ಪಿಸಿರಲಿಲ್ಲ.
ಇದಲ್ಲದೆ ಪೊಲೀಸ್ ಬಂದೋಬಸ್ತ್ ಕೂಡಾ ಹಾಕಲಾಗಿತ್ತು. ಮರವಂತೆಯ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಮರವಂತೆಯ ಗ್ರಾಮಸ್ಥರಿಗೆ ದೇವರ ದರ್ಶನಕ್ಕಷ್ಟೇ ಅವಕಾಶ ಕಲ್ಪಿಸಲಾಗಿತ್ತು. ಮರವಂತೆ ಗ್ರಾಮದ ನಿವಾಸಿಗಳು ಎನ್ನುವುದಕ್ಕೆ ಸಂಬಂಧಪಟ್ಟ ಗುರುತು ಚೀಟಿ ತೋರಿಸಿ ದೇವರ ದರ್ಶನ ಮಾಡಲು ಅನುವು ಮಾಡಿಕೊಡಲಾಗಿತ್ತು. ದೇವಸ್ಥಾನ ಪ್ರವೇಶ ಪೂರ್ವದಲ್ಲಿ ಸ್ಯಾನಿಟೈಸರ್, ಥರ್ಮಲ್ ಸ್ಕ್ಯಾನಿಂಗ್ ಮಾಡಿಸಲಾಗುತ್ತಿತ್ತು. ಭಕ್ತರಿಗೆ ಯಾವುದೇ ಪೂಜೆ ಪುನಸ್ಕಾರಗಳಿಗೆ ಅವಕಾಶವಿಲ್ಲ. ಕೇವಲ ದರ್ಶನಕ್ಕಷ್ಟೇ ಸೀಮಿತವಾಗಿತ್ತು. ಬೆಳಿಗ್ಗೆ 5 ಗಂಟೆಗೆ ದೇವಸ್ಥಾನದಲ್ಲಿ ಸಾಂಪ್ರಾದಾಯಿಕವಾದ ಪೂಜೆಗಳನ್ನು ನಡೆಸಲಾಗಿತ್ತು.
ಮರವಂತೆ ಶ್ರೀ ವರಹಾಸ್ವಾಮಿ ದೇವಸ್ಥಾನದ ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಶೋಭಾ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನೆಡೆದವು. ಬೆರಳೆಣೆಕೆಯಲ್ಲಿ ಭಕ್ತರು ಬರುತ್ತಿದ್ದರೂ ಅವರಿಗೆ ದರ್ಶನಕ್ಕೆ ಅವಕಾಶ ಕೊಡದೆ ತಿಳುವಳಿಕೆ ಹೇಳಿ ವಾಪಸ್ಸು ಕಳುಹಿಸಲಾಯಿತು.