ಮಂಗಳೂರು, ಜು. 20 (DaijiworldNews/SM): ದ.ಕ. ಜಿಲ್ಲೆಯಲ್ಲಿ ಮತ್ತೆ ಐವರು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಆ ಮೂಲಕ ಜಿಲ್ಲೆಯಲ್ಲಿ ಕೊರೊನಾ ಸಾವಿನ ಸಂಖ್ಯೆ ೮೩ಕ್ಕೆ ಏರಿಕೆಯಾದಂತಾಗಿದೆ.

ಮಂಗಳೂರು ಮೂಲದ 55 ವರ್ಷದ ವ್ಯಕ್ತಿ ಕೊರೊನಾಗೆ ಬಲಿಯಾಗಿದ್ದು, ಜುಲೈ 15ರಂದು ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದರು. ರಕ್ತದೊತ್ತಡ, ಡಯಾಬಿಟಿಸ್, ಮೂತ್ರಪಿಂಡದ ಕಾಯಿಲೆಗಳಿಂದ ಅವರು ಬಳಲುತ್ತಿದ್ದರು ಎಂದು ತಿಳಿದುಬಂದಿದೆ.
ಇನ್ನು ಮಂಗಳೂರು ನಿವಾಸಿಯಾಗಿರುವ 63 ವರ್ಷದ ವ್ಯಕ್ತಿ ಸೋಂಕಿಗೆ ಬಲಿಯಾಗಿದ್ದಾರೆ. ಇವರು ಜುಲೈ 18ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಡಯಾಬಿಟಿಸ್, ಮೂತ್ರಪಿಂಡ ಕಾಯಿಲೆ, ಅಧಿಕ ರಕ್ತದೊತ್ತಡ, ಹೃದಯ ಕಾಯಿಲೆ, ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ.
ಇನ್ನು ಬೆಳ್ತಂಗಡಿ ನಿವಾಸಿ 42 ವರ್ಷದ ವ್ಯಕ್ತಿ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ. ಜುಲೈ 17ರಂದು ಖಾಸಗಿ ಆಸ್ಪತ್ರೆಗೆ ಅವರು ದಾಖಲಾಗಿದ್ದರು. ಅವರು ಕೂಡ ಅನಾರೋಗ್ಯದಿಂದ ಬಳಲುತ್ತಿದ್ದರು ಎಂಬುವುದಾಗಿ ಆರೋಗ್ಯ ಇಲಾಖೆ ವರದಿ ಮಾಡಿದೆ.
ಇನ್ನು ಜುಲೈ 19ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಾಗಿದ್ದ, ಚಿಕ್ಕಮಗಳೂರು ಮೂಲದ 65 ವರ್ಷದ ವ್ಯಕ್ತಿ ಸೋಂಕಿಗೆ ಬಲಿಯಾಗಿದ್ದಾರೆ. ಅವರು ಶ್ವಾಸಕೋಶದ ಕ್ಯಾನ್ಸರ್ ನಿಂದ ಬಳಲುತ್ತಿದ್ದರು ಎಂಬುವುದು ಆರೋಗ್ಯ ಇಲಾಖೆಯ ವರದಿಯಲ್ಲಿ ಉಲ್ಲೇಖವಾಗಿದೆ.
ಇನ್ನು ಬಂಟ್ವಾಳ ತಾಲೂಕಿನ ಎರಡು ತಿಂಗಳ ಶಿಶು ಕೊರೊನಾ ಸೋಂಕಿಗೆ ಬಲಿಯಾಗಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ. ತೀವ್ರ ಜ್ವರ, ವಾಂತಿ, ಉಸಿರಾಟದ ತೊಂದರೆಯಿಂದಾಗಿ ಶಿಶುವನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಜುಲೈ 17ರಂದು ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಜುಲೈ 18ರಂದು ಮಗು ಮೃತಪಟ್ಟಿತ್ತು. ಇದೊಂದು ವಿಶೇಷ ಪ್ರಕರಣವಾಗಿದ್ದರಿಂದ ಆರೋಗ್ಯ ತಜ್ಞರ ಸಮಿತಿ ನಡೆಸಿ ತನಿಖೆ ನಡೆಸಲಾಗಿತ್ತು. ಜೊತೆಗೆ ಮಗುವಿನ ಕೋವಿಡ್ ಪರೀಕ್ಷೆ ನಡೆಸಲಾಗಿತ್ತು. ಇದೀಗ ವರದಿ ಪಾಸಿಟಿವ್ ಬಂದಿದೆ.