ಶಕುಂತಳಾ ಟಿ ಶೆಟ್ಟಿ ಪುತ್ತೂರು
ಮಂಡಲ ಪಂಚಾಯಿತಿಯಿಂದ ರಾಜಕೀಯ ಜೀವನಕ್ಕೆ ಕಾಲಿಟ್ಟವರು ಶಕುಂತಳಾ ಟಿ ಶೆಟ್ಟಿ, 25 ವರ್ಷಗಳ ಹಿಂದೆ ಪಕ್ಷೇತರ ಅಭ್ಯರ್ಥಿಯಾಗಿದ್ದರು. ಕುಂತೂರು ಮಂಡಳ ಪಂಚಾಯಿತಿ ಸದಸ್ಯೆಯಾಗಿ ರಾಜಕೀಯ ಪ್ರವೇಶಿಸಿದ್ದರು. ಯುವತಿ, ಮಹಿಳಾ ಮಂಡಳಗಳಲ್ಲಿ ಸಕ್ರಿಯವಾಗಿ ಗುರುತಿಸಿ ಹೋರಾಟದ ಹಾದಿ ಹಿಡಿದರು. ಬಿಜೆಪಿ ಮಹಿಳಾ ಮೋರ್ಚಾದ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದರು. ಮುಂದೆ ಶಾಸಕ ಸ್ಥಾನಕ್ಕೆ ಬಂಟ್ವಾಳದಿಂದ ರಮಾನಾಥ ರೈ ವಿರುದ್ಧ ಸ್ಪರ್ಧಿಸಿ ಸೋತರು.
ಹೋರಾಟದ ಹಾದಿ: ರಾಮಕುಂಜದ ಕುಂಡಾಜೆಯಲ್ಲಿ ನಡೆದ ಶಮೀಮಾ ಕೊಲೆ ಪ್ರಕರಣ, ಪುತ್ತೂರಿನ ಸೌಮ್ಯ ಭಟ್ ಕೊಲೆ ಪ್ರಕರಣದಲ್ಲಿ ಬೃಹತ್ ಹೋರಾಟದ ಮುಂಚೂಣಿ ವಹಿಸಿಕೊಂಡಿದ್ದರು. ಆರ್ಎಸ್ಎಸ್ನ ಅಂಗ ಸಂಸ್ಥೆಯಾದ ರಾಷ್ಟ್ರೀಯ ಸೇವಿಕಾ ಸಮಿತಿ ಸೇರಿದಂತೆ ಹಿಂದು ಸಂಘಟನೆಗಳಲ್ಲಿ ಶಕುಂತಳಾ ಪ್ರಮುಖ ಹೆಸರಾಗಿತ್ತು.
ಅದೇ ಹೋರಾಟದ ಫಲವಾಗಿ 2004 ರಲ್ಲಿ ಪುತ್ತೂರು ಶಾಸಕಿಯಾಗಿ ಬಿಜೆಪಿಯಿಂದ ಆಯ್ಕೆಗೊಂಡರು. ನಿಗಮ ಮಂಡಳಿಯ ಸ್ಥಾನ ನೀಡಲು ಮುಂದಾದಾಗ ‘ಗಂಜಿ ಕೇಂದ್ರ ಬೇಡ’ ಎಂದು ಅಸಮಾಧಾನ ಹೊರಹಾಕಿದರು. ಇದು ಅವರ ರಾಜಕೀಯ ಜೀವನದ ಬಹುದೊಡ್ಡ ತಿರುವಾಯಿತು. 2009ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ಅವಕಾಶ ಸಿಗದೆ, ಮಾಜಿ ಶಾಸಕ ಉರಿಮಜಲು ರಾಮ ಭಟ್, ಅಣ್ಣಾ ವಿನಯಚಂದ್ರ ನೇತೃತ್ವದಲ್ಲಿ ಬಂಡಾಯವಾಗಿ ಸ್ಪರ್ಧಿಸಿದರು.
ಹಲವು ಊಹಾಪೋಹಗಳ ನಡುವೆ 2012ರಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡರು. 2013ರ ಚುನಾವಣೆಯಲ್ಲಿ ಮತ್ತೆ ಪುತ್ತೂರು ಕ್ಷೇತ್ರದಿಂದ ಸ್ಪರ್ಧಿಸಿ, ಬಿಜೆಪಿಯ ಸಂಜೀವ ಮಠಂದೂರು ವಿರುದ್ಧ ವಿಜಯದ ನಗೆ ಬೀರಿದರು. ನಂತರ 2014ರಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ ಚೇರ್ಮನ್ ಆಗಿ ನೇಮಕಗೊಂಡರು. 2015ರ ನವಂಬರ್ನಲ್ಲಿ ಮುಖ್ಯಮಂತ್ರಿ ಸಂಸದೀಯ ವ್ಯವಹಾರಗಳ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದರು.
ಸಂಜೀವ ಮಠಂದೂರು
ಪುತ್ತೂರು ತಾಲೂಕಿನ ಹಿರೇಬಂಡಾಡಿ ಗ್ರಾಮದ ಸಂಜೀವ ಮಠಂದೂರು ಮೂಲತ: ಕೃಷಿಕ. ಚಿಕ್ಕವಯಸ್ಸಿನಲ್ಲೇ ತಂದೆಯನ್ನು ಕಳಕೊಂಡ ಸಂಜೀವ ಮಠಂದೂರು ಹಂತಹಂತವಾಗಿ ರಾಜಕೀಯ ಪ್ರವೇಶ ಮಾಡಿದವರು. 30 ವರ್ಷಗಳ ಸಾಮಾಜಿಕ ಜೀವನ ನಡೆಸುತ್ತಾ ಬಂದಿದ್ದಾರೆ.
52 ವರ್ಷ ವಯಸ್ಸಿನ ಸಂಜೀವ ಮಠಂದೂರು ಹಿರೇಬಂಡಾಡಿ ಗ್ರಾಮದ ದಿ.ದೇವು ಗೌಡ ಹಾಗೂ ಬಾಲಕ್ಕ ದಂಪತಿ ಪುತ್ರ. 1961 ಮೇ.1 ರಂದು ಜನಿಸಿದ ಇವರು ಹಿರೇಬಂಡಾಡಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ ಉಪ್ಪಿನಂಗಡಿ ಪದವಿಪೂರ್ವ ಕಾಲೇಜಿನಲ್ಲಿ ಪ್ರೌಢಶಿಕ್ಷಣ ಹಾಗೂ ವಿವೇಕಾನಂದ ಮಹಾವಿದ್ಯಾಲಯದಲ್ಲಿ1982-83ರಲ್ಲಿ ಪದವಿ ಶಿಕ್ಷಣ ಮುಗಿಸಿದರು.
ಆ ಬಳಿಕ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತನಾಗಿ, ಸಹಕಾರ ಸಂಘದ ವಿವಿಧ ಸಂಘಟನೆಗಳಲ್ಲಿ ಕೆಲಸ ಮಾಡುವ ಮೂಲಕ ಸಾರ್ವಜನಿಕ ರಂಗ ಪ್ರವೇಶಿಸಿದರು.
ಹಿರೇಬಂಡಾಡಿ ಪ್ರಾಥಮಿಕ ಶಾಲೆ ಅಭಿವೃದ್ಧಿ ಸಮಿತಿ ಅಧ್ಯಕ್ಷನಾಗಿ, ಉಪ್ಪಿನಂಗಡಿ ಪದವಿ ಕಾಲೇಜಿನ ಆಡಳಿತ ಸಮಿತಿ ಸದಸ್ಯನಾಗಿ ಕೆಲಸ ಮಾಡಿದ ಇವರು, ಉಪ್ಪಿನಂಗಡಿ ಸಿಎ ಬ್ಯಾಂಕ್ ನಿರ್ದೇಶಕ, ಜಿಲ್ಲಾ ಕೃಷಿಕರ ಮಾರಾಟ ಸಂಘದ ನಿರ್ದೇಶಕ, ಜನತಾ ಬಜಾರ್ ನಿರ್ದೇಶಕ, ಕ್ಯಾಂಪ್ಕೋ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. 1993ರಲ್ಲಿ ಹಿರೇಬಂಡಾಡಿ ಹಾಲು ಉತ್ಪಾದಕರ ಸಂಘದ ಸ್ಥಾಪಕಾಧ್ಯಕ್ಷ, 2008ರಲ್ಲಿ ಜಿಲ್ಲಾ ಸಹಕಾರ ಭಾರತಿ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದರು. 2008ರಿಂದ ಇಲ್ಲಿಯವರೆಗೆ ಪುತ್ತೂರು ಕೃಷಿಕ ಸಮಾಜದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ರಾಜಕೀಯ: 1994ರಲ್ಲಿ ಹಿರೇಬಂಡಾಡಿ ಗ್ರಾಪಂ ಸದಸ್ಯರಾಗಿ, 1996ರಲ್ಲಿ ಪುತ್ತೂರು ತಾಪಂ ಸದಸ್ಯರಾಗಿ, 2001ರಲ್ಲಿ ಎಪಿಎಂಸಿ ಸದಸ್ಯನಾಗಿ ಆಯ್ಕೆಯಾದರು. 2002ರಿಂದ 4 ನೇ ಬಾರಿ ಬಿಜೆಪಿ ಮಂಡಲ ಕಾರ್ಯದರ್ಶಿಯಾಗಿ, ವಿಧಾನಸಭಾ ಕ್ಷೇತ್ರದ ಕಾರ್ಯದರ್ಶಿಯಾಗಿ, ಜಿಲ್ಲಾ ಸಮಿತಿ ಸದಸ್ಯರಾಗಿ, ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದರು. 2016ರಿಂದ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನ ಶಕುಂತಳಾ ಟಿ ಶೆಟ್ಟಿ ವಿರುದ್ದ ಅಲ್ಪಮತಗಳ ಅಂತರದಿಂದ ಪರಾಭವಗೊಂಡಿದ್ದರು. ಅಡಿಕೆಗೆ ಬೆಂಬಲ ಬೆಲೆಗಾಗಿ ಕಾಲ್ನಡಿಗೆ ಯಾತ್ರೆಯಲ್ಲಿ ಭಾಗವಹಿಸಿದ್ದು ಸೇರಿದಂತೆ ಹಿರೇಬಂಡಾಡಿ ಸರ್ಕಾರಿ ಬಸ್ಸು ಹೋರಾಟ ಸಮಿತಿ ಅಧ್ಯಕ್ಷರಾಗಿ ಹೋರಾಟ ಮಾಡಿದ್ದಾರೆ.