ಬೆಳ್ತಂಗಡಿ ಸೆ21: ಇಲ್ಲಿನ ಕಡಿರುದ್ಯಾವರ ಗ್ರಾಮದ ಕಾನರ್ಪ ಎಂಬಲ್ಲಿ ಮದ್ಯದಂಗಡಿ ಪ್ರಾರಂಭಕ್ಕೆ ಗ್ರಾಮಸ್ಥರ ಭಾರೀ ವಿರೋಧ ವ್ಯಕ್ತವಾಗಿದೆ. ನಾಗರೀಕರ ತೀವ್ರ ವಿರೋಧದ ನಡುವೆಯು ಸ್ಥಳೀಯ ಕಡಿರುದ್ಯಾವರ ಗ್ರಾಮ ಪಂಚಾಯತ್ ಹಾಗೂ ಅಬಕಾರಿ ಇಲಾಖೆ ಮಂಗಳೂರು,ಪರವಾನಿಗೆ ನೀಡಿದ್ದು ಸಾರ್ವಜನಿಕರಲ್ಲಿ ಆತಂಕವನ್ನು ಸೃಷ್ಠಿಸಿದೆ. ತುಕರಾಮ ಬಂಗೇರರ ಮಾಲಕತ್ವ ಮದ್ಯದಂಗಡಿ ಪ್ರಾರಂಭಕ್ಕೆ, ಗ್ರಾಮಸ್ಥರ ನಕಲಿ ಸಹಿ ಬಳಸಿಲಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂದು ಬಾರ್ ತೆರೆಯುತ್ತಿದ್ದಂತೆ ಜಮಾಯಿಸಿದ ನೂರಾರು ಗ್ರಾಮಸ್ಥರು ಮದ್ಯದಂಗಡಿ ತೆರವಿಗೆ ಆಗ್ರಹಿಸಿ ಪ್ರತಿಭಟನೆಯಲ್ಲಿ ನಿರತರಾಗಿದ್ದಾರೆ.
ಸುತ್ತಮುತ್ತ ಕಡು ಬಡತನದ ರೈತರ ಮನೆಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಾಲೋನಿಗಳು ಹಾಗೂ 100 ಮೀಟರ್ ಅಂತರದಲ್ಲಿ ಅಂಗನವಾಡಿ ಕೇಂದ್ರ ಹಾಗೂ 200 ಮೀಟರ್ ದೂರದಲ್ಲಿ ಹಿರಿಯ ಪ್ರಾಥಮಿಕ ಶಾಲೆ, ಆಂಜನೇಯ ದೇವಸ್ಥಾನ, ದೇವರಕಾಡು ವನ ಮತ್ತು ಮದ್ಯದಂಗಡಿ ಸ್ಥಾಪನೆಗೆ ಮುಂದಾಗಿರುವ ಕಟ್ಟಡದ ಎಡಭಾಗದಲ್ಲಿ ಸಾರ್ವಜನಿಕರಿಗೆ ಅನುಕೂಲ ಆಗುವಂತೆ ಬಸ್ಸು ತಂಗುದಾಣವಿದೆ. ಹೀಗಾಗಿ ಅಧಿಕಾರಿಗಳು ಕಣ್ಣು ಮುಚ್ಚಿ ಪರವಾನಿಗೆ ನೀಡಿದ್ದು ವಿಪರ್ಯಾಸ ಎಂದು ಕಿಡಿಕಾರಿದ್ದಾರೆ.
ಪರವಾನಿಗೆ ನೀಡದಂತೆ ಸಂಬಂದಪಟ್ಟ ಅಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದರೂ, ಅಧಿಕಾರಿಗಳು ಮದ್ಯದಂಗಡಿ ಮಾಲಕರ ಜತೆ ಲಾಬಿ ನಡೆಸಿ ಪರವಾನಿಗೆ ನೀಡಿದ್ದಾರೆ, ಹೀಗಾಗಿ ಜಿಲ್ಲಾಧಿಕಾರಿ ಸ್ಥಳಕ್ಕಾಗಮಿಸಿ ಸಮಸ್ಯೆ ಪರಿಹರಿಸದಿದ್ದರೆ ಮುಂದೆ ಕ್ರಾಂತಿಕಾರಿ ಹೋರಾಟ ಹಾದಿ ಹಿಡಿಯಲಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಪ್ರತಿಭಟನೆಗೆ ಮದ್ಯದಂಗಡಿ ವಿರೋಧಿ ಹೋರಾಟ ಸಮಿತಿ ಸದಸ್ಯರು,ಚಿರಂಜೀವಿಯುವಕ ಮಂಡಲ ಹಾಗೂ ದುರ್ಗಾಶಕ್ತಿ ಮಹಿಳಾ ಸಂಘದ ಸದಸ್ಯರು ಸಾಥ್ ನೀಡಿದ್ದಾರೆ. ಇನ್ನು ಅಹಿತಕರ ಘಟನೆ ನಡೆಯದಂತೆ ಸ್ಥಳದಲ್ಲಿ ಪೊಲೀಸ್ ರು ಬೀಡುಬಿಟ್ಟಿದ್ದಾರೆ.