ಕಾರ್ಕಳ, ಏ16: ಕಾರ್ಕಳ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಪ್ರಬಲ ಅಕಾಂಕ್ಷಿಯಾಗಿದ್ದ ಉದ್ಯಮಿ ಮುನಿಯಾಲು ಉದಯ ಶೆಟ್ಟಿ ಅವರಿಗೆ ಟಿಕೆಟ್ ’ಕೈ’ ತಪ್ಪಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಸಕ್ರಿಯಾ ಕಾರ್ಯಕರ್ತರು ಅಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ ಘಟನೆ ಸೋವುವಾರ ನಡೆದಿದೆ.
ಇದೇ ಸಂದರ್ಭದಲ್ಲಿ ಬೆಳವಣಿಗೆ ಕಾರಣವೆನ್ನಲಾದ ಮಾಜಿ ಮುಖ್ಯಮಂತ್ರಿ ಡಾ.ಎಂ.ವೀರಪ್ಪ ಮೊಯ್ಲಿಯವರ ಪ್ರತಿಕೃತಿಯನ್ನು ದಹಿಸಲು ಮುಂದಾದ ಸಂದರ್ಭದಲ್ಲಿ ಪೊಲೀಸರ ಮಧ್ಯಪ್ರವೇಶದಿಂದ ಕಾರ್ಯಕರ್ತರ ಪ್ರಯತ್ನ ವಿಫಲಗೊಂಡ ಘಟನಾವಳಿ ನಡೆದಿದೆ. ಮೊಯ್ಲಿ ಹಠಾವೋ.. ಕಾಂಗ್ರೆಸ್ ಬಚಾವೋ ಎಂಬ ಘೋಷಣೆ ಮುಗಿಲು ಮುಟ್ಟಿದವು.
ಸಹಸ್ರಾರು ಸಂಖ್ಯೆಯಲ್ಲಿ ಸೇರಿದ ಕಾರ್ಯಕರ್ತರು, ತಾಲೂಕು ಕಛೇರಿಯಿಂದ ಮೆರವಣಿಗೆ ಹೊರಟು, ಮಾಜಿ ಶಾಸಕ ಎಚ್.ಗೋಪಾಲ ಭಂಡಾರಿ ಕಛೇರಿ ಮುಂದೆ ಜಮಾಯಿಸಿ ಅಕ್ರೋಶ ವ್ಯಕ್ತಪಡಿಸಿದರು. ಗೆಲ್ಲುವ ವಾತಾವರಣವಿದ್ದರೂ, ಡಾ.ಎಂ.ವೀರಪ್ಪ ಮೊಯ್ಲಿ ಅವರು ಅವಕಾಶ ನೀಡಲಿಲ್ಲ.
ಕಳೆದ ಐದು ವರ್ಷಗಳಿಂದ ಕಾರ್ಯಕರ್ತರ ಕಡೆಗೆ ಮುಖ ಮಾಡದ ಮೊಯ್ಲಿ ಅವರು, ಇದೀಗ ತಮ್ಮ ಚೇಳಗಳಾದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜಿ.ಎ.ಭಾವ ಮತ್ತು ಕಾರ್ಯದರ್ಶಿ ಭರತ್ ಮುಂಡೋಡಿ ಮೂಲಕ ತಮಗೆ ಬೇಕಾದ ರೀತಿಯಲ್ಲಿ ವರದಿ ತರಿಸಿಕೊಂಡು ಎಚ್.ಗೋಪಾಲ ಭಂಡಾರಿಗೆ ಟಿಕೆಟ್ ಕೊಡಿಸಿದ್ದಾರೆ. ಇದನ್ನು ನಾವು ಬಹಿಷ್ಕರಿಸಬೇಕು. ಚುನಾವಣಾ ಸಂದರ್ಭದಲ್ಲಿ ಯಾವುದೇ ಗ್ರಾಮದಲ್ಲೂ ಕಾಂಗ್ರೆಸ್ ಬೂತ್ಗೆ ಅವಕಾಶ ಕಲ್ಪಿಸಿಕೊಡದೆ, ಕಾಂಗ್ರೆಸ್ ಬಚಾವೋ ಮೊಯ್ಲಿ ಹಠಾವೋ ಆಂದೋಲನವನ್ನು ಹಮ್ಮಿಕೊಳ್ಳೊಣ ಎಂದು ಕಾಂಗ್ರೆಸ್ ಕಾರ್ಯಕರ್ತರು ಸಭೆಯಲ್ಲಿ ತಿಳಿಸಿದರು.
ಮೈಕ್ ದೂಡಿದ ಪೊಲೀಸರು :
ಪ್ರತಿಭಟನಾ ನಿರತದ ಮಧ್ಯೆ ವರದಿ ಮಾಡಲೆಂದು ಅಲ್ಲಿಗೆ ಆಗಮಿಸಿದ ದೃಶ್ಯ ಮಾಧ್ಯಮದ ಕ್ಯಾಮರಾಗಳನ್ನು ಪೊಲೀಸರು ದೂಡಿರುವುದು ಪ್ರತಿಭಟನೆಯಲ್ಲಿ ಕಂಡು ಬಂತು. ಪ್ರತಿಭಟನೆಯಿಂದ ಹಿಂತಿರುಗುತ್ತಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಎದೆಗೆ ಕೈ ಹಾಕಿ ದಬ್ಬಿರುವ ಕುರಿತು, ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ವಾಗ್ವಾದಕ್ಕೆ ಕಾರಣವಾಯಿತು.
ಪರಿಸರದ ಹೋಟೆಲ್ವೊಂದರ ಮುಂಭಾಗದಲ್ಲಿ ಗ್ರಾಹಕರು ನಿಲ್ಲಿಸಿದ ವಾಹನಗಳ ನಂಬರ್ ಗಳನ್ನು ಪೊಲೀಸ್ ತನ್ನ ಕ್ಯಾಮರದಲ್ಲಿ ಸೆರೆ ಹಿಡಿಯುತ್ತಿದ್ದುದನ್ನು ನಾಗರಿಕರು ಅಕ್ಷೇಪ ವ್ಯಕ್ತಪಡಿಸಿದರು.
ಪ್ರತಿಕೃತಿ ಶೋ :
ಮೆರವಣಿಗೆ ಸಾಗಿ ಬಂದ ಸಂದರ್ಭ ಡಾ.ಎಂ.ವೀರಪ್ಪ ಮೊಯ್ಲಿ ಅವರ ಪ್ರತಿಕೃತಿಯನ್ನು ಹೊತ್ತುಕೊಂಡು ಸಾಗಲಾಗಿತ್ತು. ಅದೇ ಪ್ರತಿಕೃತಿಗೆ ದಹನಕ್ಕೆ ಬೆಂಕಿ ಹಚ್ಚುತ್ತಲೇ ಪೊಲೀಸರು ಅದನ್ನು ತಡೆದರು. ಅಲ್ಲದೆ ಜಿ.ಎ.ಭಾವ ಮತ್ತು ಭರತ್ ಮುಂಡೋಡಿ ಅವರ ಭಾವಚಿತ್ರವನ್ನು ಕಾರ್ಯಕರ್ತರು ತುಳಿದು ಅಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಗೆ ಅನುಮತಿ ಇಲ್ಲ -ತಹಶೀಲ್ದಾರ್ ಮಹಮ್ಮದ್ ಇಸಾಕ್
ಕಾಂಗ್ರೆಸ್ ಪಕ್ಷದೊಳಗಿನ ಅಂತರಿಕ ಕಚ್ಚಾಟ ನೆಪದಲ್ಲಿ ಯಾವುದೇ ಪ್ರತಿಭಟನೆಗೆ ಅನುಮತಿ ನೀಡಿಲ್ಲ. ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ಚುನಾವಣಾ ವಿಭಾಗದ ಕಾರ್ಯಚರಣೆ ತಂಡದಿಂದ ವರದಿಯನ್ನು ತರಿಸಿ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ಮಹಮ್ಮದ್ ಇಸಾಕ್ ತಿಳಿಸಿದ್ದಾರೆ.