ಕಾಸರಗೋಡು, ಜು 22 (Daijiworld News/MSP): ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಎರಡನೇ ಬಲಿಯಾಗಿದೆ. ನಗರ ಹೊರವಲಯದ ಅಣಂಗೂರು ಪಚ್ಚೆಕ್ಕಾಡ್'ನ 48 ವರ್ಷದ ಮಹಿಳೆ ಬುಧವಾರ ಮುಂಜಾನೆ ಮೃತಪಟ್ಟಿದ್ದು, ಕಣ್ಣೂರು ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಜ್ವರದ ಹಿನ್ನಲೆಯಲ್ಲಿ ಕೆಲ ದಿನಗಳ ಹಿಂದೆ ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಪಾಸಣೆ ನಡೆಸಿದಾಗ ಕೊರೊನ ಪಾಸಿಟಿವ್ ಪತ್ತೆಯಾಗಿತ್ತು . ಬಳಿಕ ಜುಲೈ 20 ರಂದು ಕಣ್ಣೂರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಇವರಿಗೆ ಸೋಂಕು ಎಲ್ಲಿಂದ ತಗುಲಿತ್ತು ಎಂಬ ಬಗ್ಗೆ ಇನ್ನೂ ದೃಢಪಟ್ಟಿಲ್ಲ. ಮನೆಯವರಿಗೆ ಇದುವರೆಗೆ ಸೋಂಕು ಪತ್ತೆಯಾಗಿಲ್ಲ. ಮಹಿಳೆಗೆ ಸೋಂಕು ದೃಢಪಟ್ಟ ಹಿನ್ನಲೆಯಲ್ಲಿ ಮನೆಯವರ ಗಂಟಲ ದ್ರವವನ್ನು ತಪಾಸಣೆಗೆ ಕಳುಹಿಸಲಾಗಿದೆ.
ಜಿಲ್ಲೆಯಲ್ಲಿ ಮೂರನೇ ಹಂತದಲ್ಲಿ ಸಂಪರ್ಕದಿಂದ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿದ್ದು , ನಿನ್ನೆ 40 ರಲ್ಲಿ 37 ಮಂದಿಗೂ ಸಂಪರ್ಕದಿಂದ ಸೋಂಕು ದೃಢಪಟ್ಟಿತ್ತು. ಜುಲೈ 18 ರಂದು ಉಪ್ಪಳ ಹಿದಾಯತ್ ನಗರದ ಮಹಿಳೆ ಯೋರ್ವರು ಕೊರೋನ ದಿಂದ ಮೃತಪಟ್ಟಿದ್ದರು. ಇವರಿಗೂ ಸಂಪರ್ಕದಿಂದ ಸೋಂಕು ತಗಲಿತ್ತು.
ಫೆಬ್ರವರಿ 3 ರಂದು ಜಿಲ್ಲೆಯಲ್ಲಿ ಮೊದಲ ಕೊರೋನ ಪ್ರಕರಣದ ದೃಢಪಟ್ಟಿತ್ತು. ಬಳಿಕ ಎರಡು ಹಂತಗಳಲ್ಲಿ 178 ಮಂದಿ ಯಲ್ಲಿ ಸೋಂಕು ಪತ್ತೆಯಾಗಿ ಎಲ್ಲರೂ ಗುಣಮುಖರಾಗಿದ್ದರು. ಸಂಪೂರ್ಣ ಸೋಂಕು ಮುಕ್ತವಾಗಿದ್ದ ಜಿಲ್ಲೆಯಲ್ಲಿ ಮೇ ಮೊದಲ ವಾರದಲ್ಲಿ ಮತ್ತೆ ಸೋಂಕು ಆರಂಭವಾಗಿತ್ತು. ಮೂರನೇ ಹಂತದಲ್ಲಿ 794 ಮಂದಿಗೆ ಸೋಂಕು ತಗಲಿದ್ದು ಈ ಪೈಕಿ 311 ಮಂದಿಗೆ ಸಂಪರ್ಕದಿಂದ ಸೋಂಕು ತಗಲಿದೆ. ಇದುವರೆಗೆ ಜಿಲ್ಲೆಯಲ್ಲಿ 972 ಮಂದಿಗೆ ಸೋಂಕು ದೃಢಪಟ್ಟಿದ್ದು , 542 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. 429 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.