ಕುಂದಾಪುರ, ಜು 22 (Daijiworld News/MSP): ಯುವ ಜನತೆ ಕೃಷಿಯತ್ತ ಹೆಚ್ಚು ಆಸಕ್ತಿ ಬೆಳೆಸಿಕೊಳ್ಳಬೇಕು. ಕೃಷಿ ಈ ದೇಶದ ಉಸಿರು ಎನ್ನುವುದಕ್ಕೆ ಸ್ಪೂರ್ತಿಯುತ ಬೆಳವಣಿಗೆಗಳು ಸಾಕ್ಷಾತ್ಕಾರಗೊಳ್ಳುತ್ತಿದೆ. ಅನ್ನದ ಬಟ್ಟಲುಗಳಿಂತಿರುವ ಭತ್ತದ ಗದ್ದೆಗಳೇ ಮಾಯವಾಗುತ್ತಿರುವ ಈ ದಿನಗಳಲ್ಲಿ ಫಲವತ್ತಲ್ಲದ ಬರಡು ಭೂಮಿಗಳಲ್ಲಿ ಭತ್ತ ಬೆಳೆಯುವ ಸಾಹಸಿ ಪ್ರವೃತ್ತಿಗಳು ಸೃಷ್ಟಿಯಾಗುತ್ತಿವೆ. ಇಂತಹದ್ದೊಂದು ಆಸಕ್ತಿದಾಯಕ, ಕೃಷಿ ಸ್ಪೂರ್ತಿಯ ವಿದ್ಯಮಾನ ವಂಡ್ಸೆ ಸಮೀಪದ ಜಡ್ಡು ಪರಿಸರದಲ್ಲಿ ನಡೆದಿದೆ.



ಫಲವತ್ತಾದ ಗದ್ದೆಗಳೇ ನಿರ್ಲಕ್ಷ್ಯಕ್ಕೆ ತುತ್ತಾಗುತ್ತಿರುವ ಈ ದಿನಗಳಲ್ಲಿ ಯುವ ಸಮುದಾಯ ಗುಡ್ಡ ಪ್ರದೇಶದಲ್ಲಿ ಹೊಸದಾಗಿ ಗದ್ದೆಗಳ ನಿರ್ಮಾಣ ಮಾಡಿದೆ. ಹೊಸ ಗದ್ದೆಗಳನ್ನು ನಾಟಿಗೆ ಪರಿವರ್ತಿಸಿದೆ. ನೇಜಿ ಸಿದ್ದಪಡಿಸಿ ಸಾಲು ನಾಟಿಯನ್ನು ಮಾಡಿ ಸಂಭ್ರಮ ಪಟ್ಟಿದ್ದಾರೆ. ಕೃಷಿಯಲ್ಲಿ ಸಿಗುವ ಖುಷಿ ಇದೆಯಲ್ಲ ಅದು ಅವರ್ಣಾನಾತೀತ. ಅಂತಹ ಅನುಭವವನ್ನು ಈ ಯುವ ಮನಸ್ಸುಗಳು ಪಟ್ಟಿದ್ದಾರೆ. ಈ ಕೃಷಿ ಖುಷಿಯ ಹಿನ್ನೆಲೆ ಕೃಷಿಯ ಬಗ್ಗೆ ಅರಿವು ಮೂಡಿಸುವುದು, ಹಡಿಲು ಬೀಳಿಸುವ ಪರಿಪಾಠ ನಿಲ್ಲಬೇಕು, ಯುವ ಸಮುದಾಯ ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕು ಎನ್ನುವುದು ಇವರ ಆಶಯ.
ವಂಡ್ಸೆ ಹಾಡಿಮನೆ ತುಂಗ ಪೂಜಾರಿಯವರ ಮನೆ ‘ನಾಗಶ್ರೀ’ಯ ವಠಾರದಲ್ಲಿ ಈ ಕೃಷಿ ಕಾರ್ಯ ನಡೆದಿದೆ. ರಾಘವೇಂದ್ರ ಪೂಜಾರಿ ಮತ್ತು ಅರೋಮಾ ಫ್ರೆಂಡ್ಸ್ ಸಾರಥ್ಯದಲ್ಲಿ ಪ್ರಗತಿಪರ ಕೃಷಿಕ ಪ್ರಕಾಶ್ ಪೂಜಾರಿ ಜೆಡ್ಡು ಇವರ ಮಾರ್ಗದರ್ಶನದಲ್ಲಿ ಬರಡು ಭೂಮಿಯಲ್ಲಿಯೂ ಕೃಷಿ ಮಾಡಬಹುದು ಎನ್ನುವ ಕಾರ್ಯ ನಡೆದಿದೆ. ಇದು ಸುತ್ತಮುತ್ತಲ ಜನರಿಗೆ ಹೊಸ ಪ್ರೇರಣೆ-ಸ್ಪೂರ್ತಿಯಾಗಿದೆ.