ಕಾಸರಗೋಡು, ಜು 22 (Daijiworld News/MSP): ಪೋಕ್ಸೋ ಪ್ರಕರಣದ ಆರೋಪಿ ಪೊಲೀಸರಿಂದ ತಪ್ಪಿಸಿ ಸಮುದ್ರಕ್ಕೆ ಹಾರಿದ ಘಟನೆ ಕಾಸರಗೋಡು ಬಂದರು ಬಳಿ ನಡೆದಿದೆ. ಸೂರ್ಲು ಕಾಳ್ಯಾಂಗಾಡ್ ನ ಮಹೇಶ್ ( 28) ಸಮುದ್ರಕ್ಕೆ ಹಾರಿದ ಆರೋಪಿಯಾಗಿದ್ದಾನೆ.

ಬುಧವಾರ ಬೆಳಿಗ್ಗೆ ಮಾಹಿತಿ ಕಲೆಹಾಕಲು ಬಂದರು ಸಮೀಪಕ್ಕೆ ಕರೆ ತಂದ ಸಂದರ್ಭದಲ್ಲಿ ಪೊಲೀಸರಿಂದ ತಪ್ಪಿಸಿ ಸುಮಾರು 200 ಮೀಟರ್ ನಷ್ಟು ಓಡಿದ ಆರೋಪಿ ಸಮುದ್ರಕ್ಕೆ ಹಾರಿದ್ದ , ಪೊಲೀಸರು ತಕ್ಷಣ ಆತನನ್ನು ರಕ್ಷಿಸಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಸದ್ಯ ಆರೋಪಿಗಾಗಿ ಕರಾವಳಿ ಪಡೆ ಸಿಬಂದಿಗಳು , ಸ್ಥಳೀಯರು ಹಾಗೂ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಶೌಚಾಲಯದಲ್ಲಿ ಬಾಲಕಿಯ ದೃಶ್ಯವನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಹೇಶ್ ನನ್ನು ಬಂಧಿಸಲಾಗಿತ್ತು . ಹೆಚ್ಚಿನ ಮಾಹಿತಿ ಕಲೆ ಹಾಕಲು ಕರೆ ತಂದಾಗ ಘಟನೆ ನಡೆದಿದೆ. ಚಿತ್ರೀಕರಿಸಿದ ಮೊಬೈಲ್ ನ್ನು ನೆಲ್ಲಿಕುಂಜೆಯ ಬಂದರು ಬಳಿ ಅಡಗಿಸಿಟ್ಟಿರುವುದಾಗಿ ವಿಚಾರಣೆ ವೇಳೆ ಆರೋಪಿ ಬಾಯ್ಬಿಟ್ಟಿದ್ದು , ಇದರಂತೆ ಹೆಚ್ಚಿನ ಮಾಹಿತಿ ಕಲೆ ಹಾಕಲು ಕರೆ ತರಲಾಗಿತ್ತು.