ಏ 17: ಈ ಸಾರಿಯ ಮುಂಗಾರು ಮಾರುತಗಳು ಸಾಮಾನ್ಯ ಮಳೆ ಸುರಿಸಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದೀರ್ಘಾವಧಿ ಸರಾಸರಿಯ ಶೇ 97ರಷ್ಟು ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಸೋಮವಾರ ಘೋಷಿಸಿದೆ. ಇಲಾಖೆ ಲೆಕ್ಕಾಚಾರಕ್ಕಿಂತ ಶೇ 5ರಷ್ಟು ಹೆಚ್ಚು ಅಥವಾ ಕಡಿಮೆ ಮಳೆ ಆಗಬಹುದು ಎಂದು ಇಲಾಖೆ ಮಹಾನಿರ್ದೇಶಕ ಕೆ.ಜೆ. ರಮೇಶ್ ಹೇಳಿದ್ದಾರೆ.
ಭಾರತದಲ್ಲಿ ವರ್ಷದಲ್ಲಿ ಸುರಿಯುವ ಒಟ್ಟು ಮಳೆಯ ಶೇ 70ರಷ್ಟು ಮುಂಗಾರು ಅವಧಿಯಲ್ಲಿಯೇ ಆಗುತ್ತದೆ. ಮುಂಗಾರಿನಲ್ಲಿ ಉತ್ತಮ ಮಳೆಯಾದರೆ ಕೃಷಿ ಉತ್ಪಾದಕತೆ ಹೆಚ್ಚಾಗುತ್ತದೆ. ಪರಿಣಾಮವಾಗಿ ಆರ್ಥಿಕತೆ ಚೇತರಿಸಿಕೊಳ್ಳುತ್ತದೆ. ಅಲ್ಲದೆ ಈ ಬಾರಿ ಎಲ್ನಿನೊ ಪರಿಣಾಮದ ಸಾಧ್ಯತೆ ಕಡಿಮೆ ಇದೆ. ಪೆಸಿಫಿಕ್ ಸಾಗರದ ಮೇಲ್ಮೈಯಲ್ಲಿ ಅಸಹಜ ಬಿಸಿಯಾಗುವಿಕೆಯನ್ನು ಎಲ್ನಿನೊ ಎಂದು ಕರೆಯುತ್ತಾರೆ. ಇ. ಮುಂಗಾರು ಕೊನೆಯಲ್ಲಿ ಎಲ್ನಿನ ಪರಿಣಾಮ ದುರ್ಬಲವಾಗಬಹುದು ಎಂದು ಈಗ ಅಂದಾಜಿಸಲಾಗಿದೆ. ಮುಂಗಾರು ಮಳೆ ಕೊರತೆಯಾಗಬಹುದು ಎಂಬ ಸಾಧ್ಯತೆ ತುಂಬಾ ಕ್ಷೀಣ. ಮೇ ಮಧ್ಯಭಾಗದಲ್ಲಿ ಮುಂಗಾರು ಯಾವಾಗ ಭಾರತ ಪ್ರವೇಶಿಸಲಿದೆ ಎಂಬುದನ್ನು ತಿಳಿಸಲಾಗುವುದು’ ಎಂದು ಅವರು ಸ್ಪಷ್ಟಪಡಿಸಿದರು.