ಮಂಗಳೂರು, ಜು. 22 (DaijiworldNews/MB) : ಕರ್ನಾಟಕ ರಾಜ್ಯದ ಜಿಲ್ಲೆವಾರು ಸೋಂಕಿತರ ಪಟ್ಟಿಯಲ್ಲಿ ಈಗಾಗಲೇ ಬೆಂಗಳೂರು ಮೊದಲನೇ ಸ್ಥಾನದಲ್ಲಿದ್ದು ದಕ್ಷಿಣ ಕನ್ನಡ ಎರಡನೇ ಸ್ಥಾನದಲ್ಲಿ ಇದೆ ಎಂದು ವರದಿ ತಿಳಿಸಿದೆ.

ವರದಿಯ ಪ್ರಕಾರ ಬೆಂಗಳೂರಿನಲ್ಲಿ ಈವರೆಗೆ 34,743 ಮಂದಿಗೆ ಕೊರೊನಾ ಸೋಂಕು ತಗುಲಿದ್ದು ಬೆಂಗಳೂರಿನ ಬಳಿಕ ಎರಡನೇ ಸ್ಥಾನದಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ ಸಂಜೆಯವರೆಗೆ 3829 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಬೆಂಗಳೂರಿನಲ್ಲಿ ಪ್ರಸ್ತುತ 26,746 ಸಕ್ರಿಯ ಪ್ರಕರಣಗಳಾಗಿದ್ದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಸ್ತುತ 2574 ಕೊರೊನಾ ಸೋಂಕು ಪ್ರಕರಣಗಳು ಸಕ್ರಿಯವಾಗಿದೆ. ಬೆಂಗಳೂರಿನಲ್ಲಿ 720 ಮಂದಿ ಕೊರೊನಾಗೆ ಬಲಿಯಾಗಿದ್ದು ದ.ಕ. ಜಿಲ್ಲೆಯಲ್ಲಿ 73 ಮಂದಿ ಕೊರೊನಾದಿಂದಾಗಿ ಸಾವನ್ನಪ್ಪಿದ್ದಾರೆ.
ನಾಳೆಯಿಂದ ಜಿಲ್ಲೆಯಲ್ಲಿ ಲಾಕ್ಡೌನ್ ತೆರವಾಗಲಿದ್ದು ಉದ್ಯೋಗಗಳು ಪುನರ್ ಆರಂಭವಾಗಲಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ನಮ್ಮ ಜಾಗಾರೂಕತೆಯನ್ನು ನಾವು ಮಾಡುವ ಅನಿವಾರ್ಯತೆ ನಮ್ಮೆದುರಿದೆ. ಜಿಲ್ಲೆಯಲ್ಲಿ ನಾವು ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸಿ ನಮ್ಮ ರಕ್ಷಣೆಯನ್ನು ನಾವು ಮಾಡಿಕೊಳ್ಳಬೇಕಾಗಿದೆ.
ಜಿಲ್ಲೆಯು ಪ್ರಸ್ತುತ ಪಾಸಿಟಿವ್ ಪ್ರಕರಣ ಹಾಗೂ ಮರಣ ಸಂಖ್ಯೆಯಲ್ಲಿ ರಾಜ್ಯವಾರು ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಈ ನಿಟ್ಟಿನಲ್ಲಿ ನಾಗರಿಕರು ಯಾವುದೇ ಭಯ ಪಡುವ ಅಗತ್ಯವಿಲ್ಲ, ಆದರೆ ಜಾಗಾರೂಕರಾಗಿರುವುದು ಅತ್ಯಗತ್ಯವಾಗಿದೆ. ಮಾಸ್ಕ್ ಧರಿಸಿ ಸುರಕ್ಷಿತರಾಗಿರಬೇಕೆಂಬುದು ನಮ್ಮ ವಿನಂತಿ.