ಮಂಗಳೂರು, ಜು 22 (DaijiworldNews/PY): ಕೊರೊನಾ ಟೆಸ್ಟ್ ವರದಿಯ ಎಡವಟ್ಟಿನಿಂದಾಗಿ ವ್ಯಕ್ತಿಯೋರ್ವ ಗೊಂದಲಕ್ಕೀಡಾದ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಈ ಬಗ್ಗೆ ದೈಜಿವರ್ಲ್ಡ್ ಜೊತೆ ತನಗಾದ ಅನುಭವ ಹಂಚಿಕೊಂಡ ಗಂಜಿಮಠದ ಮುತ್ತೂರು ತಾಲೂಕಿನ ನಿವಾಸಿ, ತಲೆ ನೋವಿನ ಹಿನ್ನೆಲೆ ನಾನು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದೆ. ವೈದ್ಯರು ಕೊರೊನಾ ಪರೀಕ್ಷೆ ಮಾಡುವಂತೆ ವೆನ್ಲಾಕ್ ಆಸ್ಪತ್ರೆಗೆ ಕಳುಹಿಸಿದ್ದರು. ಎರಡು ದಿನದ ನಂತರ ಕೊರೊನಾ ಪರೀಕ್ಷಾ ವರದಿಯಲ್ಲಿ ಪಾಸಿಟಿವ್ ಬಂದಿತ್ತು. ವೆನ್ಲಾಕ್ನ ವರದಿ ಬಗ್ಗೆ ಸಂಶಯ ಬಂದ ಕಾರಣ ಖಾಸಗಿ ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಸಿದ್ದ ಸಂದರ್ಭ ನೆಗೆಟಿವ್ ವರದಿಯಾಗಿದೆ. ಬಳಿಕ ಮೂರನೇ ಖಾಸಗಿ ಆಸ್ಪತ್ರೆಗೆ ತೆರಳಿ ಕೊರೊನಾ ಪರೀಕ್ಷೆ ಮಾಡಿಸಿದ ಸಂದರ್ಭವೂ ಕೂಡಾ ನೆಗೆಟಿವ್ ಬಂದಿದೆ. ವೆನ್ಲಾಕ್ನ ವರದಿಯಲ್ಲಿ ಕೊರೊನಾ ಪಾಸಿಟಿವ್ ಬಂದ ಕಾರಣ ಮನೆಯನ್ನು ಸೀಲ್ಡೌನ್ ಮಾಡಿದ್ದು, ಅಲ್ಲದೇ, ಮನೆಯಿಂದ ಯಾರೂ ಹೊರಗೆ ಹೋಗಬಾರದು ಎಂದು ಹೇಳಿದ್ದಾರೆ. ನಾವು ಮೂರು ವರದಿಯನ್ನು ಕೂಡಾ ಕಳುಹಿಸಿಕೊಟ್ಟಿದ್ದೇವೆ. ಕೊರೊನಾ ಟೆಸ್ಟ್ ಸಂದರ್ಭ ಎಡವಟ್ಟಾಗಿದೆ ಎಂದರೂ ಸೀಲ್ಡೌನ್ ತೆರವುಗೊಳಿಸಲು ಮುಂದಾಗುತ್ತಿಲ್ಲ. ಅಲ್ಲದೇ, ಕರೆ ಕೂಡಾ ಸ್ವೀಕರಿಸುತ್ತಿಲ್ಲ ಎಂದು ಹೇಳಿದ್ದಾರೆ.
ಶಾಸಕ ಭರತ್ ಶೆಟ್ಟಿ ಅವರಿಗೆ ಈ ವಿಚಾರವಾಗಿ ಮಾಹಿತಿ ನೀಡಿದ್ದು, ಅವರು ಈ ಬಗ್ಗೆ ವಿಚಾರಿಸದರೂ ಕೂಡಾ ಗಂಜಿಮಠದ ಪಂಚಾಯತ್ನವರು ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ಕರೆ ಮಾಡಿದ್ದ ಸಂದರ್ಭ, ನಮಗೆ ಆದೇಶ ಬಂದರೆ ಮಾತ್ರವೇ ಸೀಲ್ಡೌನ್ ತೆರವುಗೊಳಿಸುವುದು ಎಂದು ಹೇಳಿದ್ದಾರೆ. ಸೀಲ್ಡೌನ್ ಇದ್ದ ಕಾರಣ ನಮಗಿಂತ ನಮ್ಮ ನೆರೆಹೊರೆಯ ಮನೆಯವರಿಗೆ ಕಷ್ಟವಾಗುತ್ತಿದೆ ಎಂದು ತಿಳಿಸಿದ್ದಾರೆ.
ನನಗೆ ವೆನ್ಲಾಕ್ ವರದಿಯ ಬಗ್ಗೆ ಸಂಶಯವಿದೆ. ಈ ರೀತಿಯಾಗಿ ವರದಿಯಲ್ಲಿ ಎಡವಟ್ಟಾದರೆ ನಾವು ಇದನ್ನು ನಂಬುವುದು ಹೇಗೆ. ಕಾಟಾಚಾರಕ್ಕೆ ವರದಿ ಮಾಡುತ್ತಾರೆ. ಇದರಿಂದ ಬಡವರಿಗೆ ಬಹಳ ಸಮಸ್ಯೆಯಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.