ಸುಬ್ರಹ್ಮಣ್ಯ, ಜು. 22 (DaijiworldNews/MB) : ರಾಜ್ಯದ ಎಲ್ಲಾ ಧಾರ್ಮಿಕ ಕ್ಷೇತ್ರದಲ್ಲಿ ದರ್ಶನಕ್ಕೆ ಮಾತ್ರ ಅವಕಾಶ, ಸೇವೆಗಿಲ್ಲ ಎಂದು ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಸ್ಪಷ್ಟನೆ ನೀಡಿದ್ದಾರೆ.

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕಾಮಗಾರಿ ವೀಕ್ಷಿಸಿ ವಿಳಂಬದ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ''ಧಾರ್ಮಿಕ ಕ್ಷೇತ್ರದಲ್ಲಿ ದೇವರಿಗೆ ಸೇವೆ ಸಲ್ಲಿಸಬೇಕು ಎಂಬ ಬಯಕೆ ಭಕ್ತರಲ್ಲಿದ್ದು ಕೊರೊನಾ ಸೋಂಕು ಕಾರಣದಿಂದ ಬೇರೆ ದಾರಿ ಇಲ್ಲದೆ ಕೇವಲ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗುತ್ತದೆ. ಯಾವುದೇ ಸೇವೆಯನ್ನು ನೀಡಲು ಸದ್ಯ ಅವಕಾಶ ನೀಡಲಾಗದು. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಹಾಗೂ ಆರೋಗ್ಯ ಇಲಾಖೆಯೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು'' ಎಂದು ತಿಳಿಸಿದರು.
''ನಾಗರಪಂಚಮಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷವಾದ ಮಹತ್ವವಿದ್ದರೂ ಕೂಡಾ ಈ ಬಾರಿ ಕೊರೊನಾ ಕಾರಣದಿಂದಾಗಿ ಸಾರ್ವಜನಿಕ ಸ್ಥಳಗಳಲ್ಲಿ ನಾಗರ ಪಂಚಮಿ ಆಚರಣೆ ನಿಷೇಧಿಸಲಾಗಿದೆ. ಮನೆಯಲ್ಲಿಯೇ ಎಲ್ಲರೂ ನಾಗರ ಪಂಚಮಿ ಆಚರಿಸಿ'' ಎಂದು ಹೇಳಿದರು.
''ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಯುತ್ತಿರುವ ಮಾಸ್ಟರ್ ಪ್ಲಾನ್ ಕಾಮಗಾರಿಯ ಒಳಚರಂಡಿ ವ್ಯವಸ್ಥೆ, ವಸತಿ ಗೃಹಗಳ ಕಾಮಾಗಾರಿ ಕುರಿತಾಗಿ ಹಲವು ದೂರುಗಳು ಬಂದ ಕಾರಣ ತನಿಖೆ ನಡೆಸಿ ವರದಿ ನೀಡಲು ಮುಜರಾಯಿ ಇಲಾಖೆಯ ಕಮಿಷನರ್ಗೆ ಸೂಚನೆ ನೀಡಲಾಗಿದೆ. ಈಗಾಗಲೇ ತನಿಖೆ ಆರಂಭವಾಗಿದ್ದು ಒಂದು ತಿಂಗಳಿನಲ್ಲಿ ವರದಿ ಲಭಿಸಲಿದೆ. ಕಾಲಗಾರಿಯಲ್ಲಿ ಯಾವುದೇ ಲೋಪವಾಗಿದ್ದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲಾಗುವುದು. ಹಾಗೆಯೇ ಕ್ಷೇತ್ರದ ಎಲ್ಲಾ ಆಸ್ತಿಗಳನ್ನು ಹದ್ದು ಬಸ್ತಿನಲ್ಲಿಡುವ ಕಾರ್ಯ ನಡೆಸಲಾಗುತ್ತಿದ್ದು ದೇವಾಲಯದ ಆಡಳಿತಾತ್ಮಕ ವಿಷಯಗಳ ಮೇಲ್ಪಿಚಾರಣೆಗೆ ವಿಶೇಷ ಲೆಕ್ಕಪರಿಶೋಧಕರನ್ನು ನೇಮಕ ಮಾಡಲಾಗಿದೆ'' ಎಂದು ತಿಳಿಸಿದ್ದಾರೆ.
ಇನ್ನು ''ಕ್ಷೇತ್ರದ ಅಭಿವೃದ್ಧಿ ಕಾಮಗಾರಿಯ ವಿಚಾರವಾಗಿ ಕಾನೂನಾತ್ಮಕ ತೊಂದರೆಗಳು ಉಂಟಾಗಿದ್ದು ಹೈಕೋರ್ಟ್ನಲ್ಲಿ ಮೂರು ಹಾಗೂ ಇತರ ನ್ಯಾಯಾಲಯಗಳಲ್ಲಿ 29 ವ್ಯಾಜ್ಯಗಳಿವೆ. ಈ ನಿಟ್ಟಿನಲ್ಲಿ ಕ್ಷೇತ್ರದ ಕಾನೂನು ವಿಷಯಗಳಿಗಾಗಿಯೇ ವಿಶೇಷ ನ್ಯಾಯವಾದಿಗಳನ್ನು ನೇಮಕ ಮಾಡಲು ತೀರ್ಮಾನಿಸಲಾಗಿದೆ'' ಎಂದು ತಿಳಿಸಿದ್ದಾರೆ.