ಹಾಸನ ಏ 17: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಗೆ ಹಿನ್ನಡೆಯಾಗಿದೆ. ವರ್ಗಾವಣೆ ಪ್ರಶ್ನಿಸಿ ರೋಹಿಣಿ ಸಿಂಧೂರಿ ಸಲ್ಲಿಸಿದ್ದ ಅರ್ಜಿಯನ್ನು ಕೇಂದ್ರ ಆಡಳಿತ ನ್ಯಾಯಮಂಡಳಿ ವಜಾಗೊಳಿಸಿದೆ. ಸಿದ್ದರಾಮಯ್ಯ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿ ಅಸ್ತು ಎಂದಿದ್ದು, ಇದರಿಂದಾಗಿ ರೋಹಿಣಿ ಅವರು ತೀವ್ರ ಹಿನ್ನಡೆ ಅನುಭವಿಸಿದ್ದಾರೆ. ಅಲ್ಲದೆ ವರ್ಗವಾಗಿ ಹೋಗಬೇಕಾಗಿರುವ ಅನಿವಾರ್ಯತೆ ಎದುರಾಗಿದೆ. ಮೈಸೂರು ಡಿಸಿ ರಂದೀಪ್ ರನ್ನು ಹಾಸನ ಡಿಸಿಯಾಗಿ ವರ್ಗಾವಣೆ ಮಾಡಲಾಗಿದ್ದು ಕೂಡಲೇ ಅಧಿಕಾರ ವಹಿಸಿಕೊಳ್ಳುವಂತೆ ಸಿಎಟಿ ಸೂಚನೆ ನೀಡಿದೆ. ಈ ಹಿಂದೆ ಉದ್ಯೋಗ, ತರಬೇತಿ ಕೇಂದ್ರದ ನಿರ್ದೇಶಕರಾಗಿ ಸಿಂಧೂರಿಯವರನ್ನು ವರ್ಗಾವಣೆ ಮಾಡಲಾಗಿತ್ತು. ಅಲ್ಲಿಗೆ ತೆರಳುವಂತೆ ಸಿಎಟಿ ಸೂಚನೆ ನೀಡಿದೆ. ಇನ್ನು ಈ ಆದೇಶ ಬಗ್ಗೆ ಎಪ್ರಿಲ್ 19 ರಂದು ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸುವುದಾಗಿ ಸಿಂದೂರಿ ಪರ ವಕೀಲ ಸುಬ್ರಹ್ಮಣ್ಯ ಜೋಯಿಸ್ ಅವರು ತಿಳಿಸಿದ್ದಾರೆ.