ಮೂಡುಬಿದಿರೆ, ಏ 17 : ಕಾರ್ಕಳದ ಕಾಂಗ್ರೆಸ್ನಲ್ಲಿ ಭುಗಿಲೆದ್ದ ಭಿನ್ನಮತ ಇದೀಗ ಬಿಜೆಪಿ ಪಕ್ಷದಲ್ಲೂ ಕಾಣಿಸಿಕೊಂಡಿದ್ದು, ಪಕ್ಷದ ಅಭ್ಯರ್ಥಿಗಳ ಪಟ್ಟಿ ಹೊರಬೀಳುತ್ತಿದ್ದಂತೆ ಭಿನ್ನಮತದ ಕಾವು ಜೋರಾಗಿದೆ. ಪುತ್ತೂರಿನಲ್ಲಿ ಸಂಜೀವ ಮಠಂದೂರಿಗೆ ಟಿಕೆಟ್ ಕೊಟ್ಟ ವಿಚಾರದಿಂದ ಅಲ್ಲಿ ಅರುಣ್ಕುಮಾರ್ ಕುಮಾರ್ ಪುತ್ತಿಲ ಹಾಗೂ ಅಶೋಕ್ ಕುಮಾರ್ ರೈ ಅಸಮಾಧಾನಗೊಂಡಿದ್ದರೆ, ಇದೀಗ ಮೂಲ್ಕಿ ಮೂಡುಬಿದಿರೆ ಕ್ಷೇತ್ರದಲ್ಲೂ ಬಂಡಾಯದ ಬಿರುಗಾಳಿ ಎದ್ದಿದೆ. ಬಿಜೆಪಿಯಲ್ಲಿಯೆ ಈ ಹಿಂದೆ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದ ಉಮಾನಾಥ ಕೋಟ್ಯಾನ್ಗೆ ಇದೀಗ ಮತ್ತೆ ಟಿಕೆಟ್ ನೀಡಿರುವುದು ಜಗದೀಶ್ ಅಧಿಕಾರಿಯಲ್ಲಿ ಆಕ್ರೋಶ ತರಿಸಿದೆ. ಈ ಬಗ್ಗೆ ಮೂಡುಬಿದಿರೆಯಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿ ಜಗದೀಶ್ ಅಧಿಕಾರಿ, ಮೂಡುಬಿದಿರೆಯಲ್ಲಿ ಗೆಲ್ಲುವ ಕುದುರೆಯನ್ನು ಚುನಾವಣೆಗೆ ನಿಲ್ಲಿಸಿಲ್ಲ ಬದಲಾಗಿ ಸತ್ತ ಕತ್ತೆಯನ್ನು ನಿಲ್ಲಿಸಲಾಗಿದೆ ಎಂದು ಉಮಾನಾಥ ಕೋಟ್ಯಾನ್ ಅವರನ್ನು ಟೀಕಿಸಿದ್ದಾರೆ. ಅಲ್ಲದೆ ಬಿಜೆಪಿ ಪಕ್ಷದ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ.
ಇಷ್ಟೇ ಅಲ್ಲದೆ ಪಕ್ಷದ ನಡೆಯ ಬಗ್ಗೆ ತೀವ್ರ ಅಸಮಧಾನಗೊಂಡಿರುವ ಅವರು , ಮೂಡುಬಿದಿರೆಯಲ್ಲಿ ಸ್ವಂತ ಖರ್ಚಿನಲ್ಲಿ ನಿರ್ಮಿಸಿರುವ ಬಿಜೆಪಿ ಕಚೇರಿಗೂ ಬೀಗ ಹಾಕಿಸಿದ್ದಾರೆ. ಅಲ್ಲದೆ ಪಕ್ಷವನ್ನು ತೊರೆಯುವ ಬಗ್ಗೆಯೂ ಇನ್ನೆರಡು ದಿನಗಳಲ್ಲಿ ನಿರ್ಧರಿಸುತ್ತೇನೆ ಎಂದಿದ್ದಾರೆ.