ಮಂಗಳೂರು, ಜು 23 (DaijiworldNews/PY): ಕೊರೊನಾ ಸೋಂಕು ನಿಯಂತ್ರಣದಲ್ಲಿ ರಾಜ್ಯ ಸರ್ಕಾರ ಮತ್ತು ದಕ್ಷಿಣ ಕನ್ನಡ ಜಿಲ್ಲಾಡಳಿತ ವಿಫಲವಾಗಿದೆ ಎಂದು ಆರೋಪಿಸಿ ದ.ಕ ಜಿಲ್ಲಾ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಯಿತು.

ನಗರದಲ್ಲಿರುವ ಜಿಲ್ಲಾ ಸರ್ಕಾರಿ ವೆನ್ಲಾಕ್ ಆಸ್ಪತ್ರೆಯ ಎದುರಗಡೆ ರಸ್ತೆ ಬದಿಯಲ್ಲಿ ನಿಂತ ಕಾಂಗ್ರೆಸಿಗರು ಮೌನ ಪ್ರತಿಭಟನೆ ನಡೆಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಮುಖಂಡರು, ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಳವಾಗುತ್ತಿದೆ. ಜಿಲ್ಲಾಡಳಿತವು ಇದನ್ನು ನಿಯಂತ್ರಿಸುವಲ್ಲಿ ವಿಫಲವಾಗಿದೆ. ಅಲ್ಲದೇ, ಚಿಕಿತ್ಸೆಗೆ ನಿರಾಕರಿಸಿದ ಖಾಸಗಿ ಆಸ್ಪತ್ರೆಗಳ ಮೇಲೆ ಕೂಡಾ ಕ್ರಮ ಕೈಗೊಳ್ಳುತ್ತಿಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ಶೇ. 50 ಹಾಸಿಗೆಗಳನ್ನು ಮೀಸಲು ಇಟ್ಟಿಲ್ಲ. ಅಲ್ಲಿಗೆ ಹೋಗುವ ಜನತೆ ಸಮಸ್ಯೆ ಎದುರಿಸುತ್ತಿದ್ದು, ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ ಎಂದು ದೂರಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಸರ್ಕಾರ ಮಾಡಿದ ಖರ್ಚಿನ ಲೆಕ್ಕವನ್ನು ಜನತೆಯ ಮುಂದೆ ಇಡಬೇಕು. ಜಿಲ್ಲಾಡಳಿತದ ತಪ್ಪು ನೀತಿಯೇ ಜಿಲ್ಲೆಯ 60ಕ್ಕೂ ಹೆಚ್ಚು ಮಂದಿ ಕೊರೊನಾ ಸೋಂಕಿನಿಂದ ಸಾಯಲು ಕಾರಣವಾಗಿದೆ ಎಂದು ಶಾಸಕ ಯು.ಟಿ.ಖಾದರ್ ಆರೋಪಿಸಿದರು.
ಸಮಿತಿ ಅಧ್ಯಕ್ಷ ಹರೀಶ್ ಕುಮಾರ್, ಮಾಜಿ ಸಚಿವ ರಮಾನಾಥ ರೈ, ಮಾಜಿ ಶಾಸಕರಾದ ಜೆ.ಆರ್.ಲೋಬೊ, ಮೊಯ್ದೀನ್ ಬಾವಾ, ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ, ಪಾಲಿಕೆ ಸದಸ್ಯ ಶಶಿಧರ ಹೆಗ್ಡೆ, ಟಿ.ಕೆ. ಸುಧೀರ್, ಪಿ.ವಿ.ಮೋಹನ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.