ಕುಂದಾಪುರ, ಸೆ21: ಶೋಭಾ ಕರಂದ್ಲಾಜೆ ಯಾವ ಆಧಾರದಲ್ಲಿ ಮುಂದಿನ ಬಿಜೆಪಿ ಪಕ್ಷದ ಅಭ್ಯರ್ಥಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರನ್ನು ಘೋಷಿಸಿದ್ದಾರೆ ಎನ್ನುವುದು ನಮಗೆ ಗೊತ್ತಿಲ್ಲ. ಹಾಲಾಡಿ ಶ್ರೀನಿವಾಸ ಶೆಟ್ಟಿ ನಮ್ಮ ಪಕ್ಷದಲ್ಲಿಲ್ಲ. ಶೋಭಾ ಕರಂದ್ಲಾಜೆಯವರ ಹೇಳಿಕೆಯಿಂದ ಕಾರ್ಯಕರ್ತರಲ್ಲಿ ಗೊಂದಲವುಂಟಾಗಿದೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಿ. ಕಿಶೋರ್ ಕುಮಾರ್ ಹೇಳಿದರು.
ಕುಂದಾಪುರದಲ್ಲಿ ಬುಧವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು. ಮಂಗಳವಾರ ಹೆರಿಕುದ್ರುವಿನಲ್ಲಿ ರಾಷ್ಟ್ರೀಯ ಹೆದ್ದಾರಿಯ ಅಂಡರ್ಪಾಸ್ ಕಾಮಗಾರಿ ವೀಕ್ಷಣೆಗೆ ಬಂದ ಸಂದರ್ಭ ಮಾಧ್ಯಮದವರಿಗೆ ನೀಡಿದ ಹೇಳಿಕೆಯಿಂದ ಕಾರ್ಯಕರ್ತರಲ್ಲಿ ಗೊಂದಲವುಂಟಾಗಿದೆ. ಈ ಗೊಂದಲವನ್ನು ಪರಿಹರಿಸಲು ನಾವು ಈ ಪತ್ರಿಕಾಗೋಷ್ಟಿಯನ್ನು ಕರೆದಿದ್ದೇವೆ ಎಂದು ಸ್ಪಷ್ಟಪಡಿಸಿದರು.
ರಾಜ್ಯದ ಎಲ್ಲಾ ಕಡೆ ಅಭ್ಯರ್ಥಿ ಯಾರು ಎಂದು ಹೈಕಮಾಂಡ್ ನಿರ್ಧರಿಸುತ್ತದೆ. ಅಭ್ಯರ್ಥಿಗಳ ಬಗ್ಗೆ ಯಾವುದೇ ಕಾರಣಕ್ಕೂ ಎಲ್ಲೂ ಹೇಳಿಕೆ ನೀಡಬಾರದೆಂದು ಕೇಂದ್ರ ವರಿಷ್ಟರು ಸೂಚನೆ ನೀಡಿದ್ದಾರೆ. ಮಾಧ್ಯಮಗಳಿಗೆ ನಮ್ಮ ಪಕ್ಷದಿಂದ ಹೊರಗೆ ಹೋದವರಿಗೆ ಟಿಕೆಟ್ ನೀಡುತ್ತೆವೆ ಎಂದು ಘೋಷಿಸಿರುವುದು ಕಾರ್ಯಕರ್ತರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಬೈಂದೂರು ಉಡುಪಿ, ಕಾರ್ಕಳವನ್ನೂ ಹೊರತುಪಡಿಸಿ ಕುಂದಾಪುರದಲ್ಲಿ ಪಕ್ಷೇತರ ಅಭ್ಯರ್ಥಿಗೆ ಟಿಕೆಟ್ ನೀಡುತ್ತೇವೆ ಎಂದು ಯಾಕೆ ಘೋಷಣೆಯನ್ನು ಮಾಡಿದ್ದಾರೆ ಎನ್ನುವುದು ನಿಗೂಢವಾಗಿದೆ ಎಂದರು.
ಬಣ ರಾಜಕೀಯದ ಕುರಿತು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಕಿಶೋರ್ ಕುಮಾರ್, ಎಲ್ಲಾ ಕಡೆಗಳಲ್ಲಿರುವಂತೆ ನಮ್ಮಲ್ಲಿಯೂ ಬಣ ರಾಜಕೀಯವಿದೆ. ಪಕ್ಷ ಸಂಘಟನೆ ಮಾಡಬೇಕು ಎಂಬುವುದು ನಮ್ಮ ವಾದವಾಗಿದೆ. ಇದರಿಂದ ಕೆಲವೊಂದು ಗೊಂದಲಗಳಿವೆ. ಇದರಲ್ಲಿ ಯಾರು ಮೇಲೆ, ಯಾರು ಕೆಳಗೆ ಎನ್ನುವುದನ್ನು ತಿರ್ಮಾನಿಸಲು ಚುನಾವಣೆ ಬರಬೇಕು. ಜಿಲ್ಲಾ ಪಂಚಾಯತ್ ಚುನಾವಣೆ ಸಂದರ್ಭ ಕೆಲವೊಂದು ಗೊಂದಲವಾಗಿತ್ತು. ವರಿಷ್ಟರ ಸೂಚನೆ ಮೇರೆಗೆ ಗೊಂದಲವಿದ್ದರೂ ಒಟ್ಟಿಗೆ ಕೆಲಸ ಮಾಡಿದ್ದೇವೆ. ಮುಂದಿನ ಚುನಾವಣೆ ಸಂದರ್ಭ ಕೂಡ ಪಕ್ಷ ಏನು ನಿರ್ಧಾರ ಕೈಗೊಳ್ಳುತ್ತದೆ ಅದಕ್ಕೆ ನಾವು ಬದ್ದರಿದ್ದೇವೆ. ಈಗ ಕುಂದಾಪುರಕ್ಕೆ ಯಾವುದೇ ಅಭ್ಯರ್ಥಿಯನ್ನು ಆಯ್ಕೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.