ಕಾಸರಗೋಡು, ಏ 17 : ಕರ್ನಾಟಕ ವಿಧಾನಸಭಾ ಚುನಾವಣೆಯ ಮಾದರಿ ನೀತಿ ಸಂಹಿತೆ ಯ ಬಿಸಿ ಗಡಿ ಜಿಲ್ಲೆಯಾದ ಕಾಸರಗೋಡಿಗೂ ತಟ್ಟಿದೆ. ಕೇರಳ - ಕರ್ನಾಟಕ ಗಡಿಯಲ್ಲಿ ಪೊಲೀಸರು ತಪಾಸಣೆ ತೀವ್ರಗೊಳಿಸಿದ್ದಾರೆ. ಈ ದಾರಿಯಾಗಿ ಹಾದು ಹೋಗುವ ಎಲ್ಲಾ ವಾಹನಗಳನ್ನು ತಪಾಸಣೆ ನಡೆಸಲಾಗುತ್ತಿದೆ. ತಲಪ್ಪಾಡಿ, ಪೆರ್ಲ, ಬಾಯಾರು ಮೊದಲಾದೆಡೆ ಕೇರಳ ಮತ್ತು ಕರ್ನಾಟಕ ಪೊಲೀಸರು ತಪಾಸಣೆ ನಡೆಸುತ್ತಿದ್ದು , ವಿಶೇಷ ನಿಗಾ ವಹಿಸಿದ್ದಾರೆ. ಕಾಸರಗೋಡು ಸೇರಿದಂತೆ ಕೇರಳದಿಂದ ಗಡಿ ಪ್ರದೇಶದ ಮೂಲಕ ಕರ್ನಾಟಕಕ್ಕೆ 50,000 ರೂ.ಕ್ಕಿಂತ ಹೆಚ್ಚು ಹಣ ಕೊಂಡೊಯ್ಯಬಾರದು ಎಂದು ಸೂಚನೆ ನೀಡಲಾಗಿದೆ. ನಿಗದಿತ ಮೊತ್ತಕ್ಕಿಂತ ಅಧಿಕ ಹಣ ಕೇರಳದಿಂದ ಕರ್ನಾಟಕಕ್ಕೆ ಸಾಗಿಸಿದ್ದಲ್ಲಿ ಅದನ್ನು ವಶಪಡಿಸಲಾಗುವುದು. ಸೂಕ್ತ ದಾಖಲೆ ಹಾಜರು ಪಡಿಸಿದ್ದಲ್ಲಿ ಮಾತ್ರ ಹಣ ಮರುಪಾವತಿ ಮಾಡಲಾಗುವುದು ಎಂದು ಕೇರಳ ಮತ್ತು ಕರ್ನಾಟಕ ಪೊಲೀಸರು ತಿಳಿಸಿದ್ದಾರೆ.
ಕೇರಳದಿಂದ ಗಡಿ ಪ್ರದೇಶದ ಮೂಲಕ ಕರ್ನಾಟಕಕ್ಕೆ ಅಕ್ರಮವಾಗಿ ಹಣ ಅಥವಾ ಮತದಾರರ ಓಲೈಕೆ ಮಾಡುವ ವಸ್ತುಗಳನ್ನು ಸಾಗಾಟ ಮಾಡುವ ಸಾಧ್ಯತೆ ಇರುವುದರಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ
ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸುವವರ ಮತ್ತು ಅಪರಾಧ ಕೃತ್ಯಗಳಲ್ಲಿ ತೊಡಗುವವರ ಬಗ್ಗೆ ಮಾಹಿತಿ ಲಭಿಸಿದ್ದಲ್ಲಿ ಅದನ್ನು ಸಾರ್ವಜನಿಕರು ಸಂಬಂಧಪಟ್ಟ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಬಹುದು. ಕರ್ನಾಟಕಕ್ಕೆ ಹಣ ಇತ್ಯಾದಿ ಸಾಗಾಟ ಪತ್ತೆಹಚ್ಚಲು ಗಡಿ ಪ್ರದೇಶಗಳಲ್ಲಿ ಆಪರೇಷನ್ ಬ್ಲೂಲೈಟ್ ಕಾರ್ಯಾಚರಣೆಗೂ ಪೊಲೀಸ್ ಇಲಾಖೆ ಚಾಲನೆ ನೀಡಿದೆ.