ಮಂಗಳೂರು, ಜು 24 (DaijiworldNews/PY): ಕಳೆದ ಎರಡು ವರ್ಷಗಳಿಂದ ಅನಾಥಾಶ್ರಮದಲ್ಲಿದ್ದ ವೃದ್ದರೊಬ್ಬರು ಸಾವನ್ನಪ್ಪಿದ್ದ ವಿಚಾರ ತಿಳಿದಿದ್ದರೂ ಕೊರೊನಾ ಭಯದಿಂದ ಕುಟುಂಬಿಕರು ಅಂತ್ಯ ಸಂಸ್ಕಾರ ಮಾಡಲು ಮುಂದೆ ಬಾರದೇ ಇದ್ದ ಕಾರಣ ಮುಸ್ಲಿಂ ಯುವಕನೋರ್ವ ಹಿಂದೂ ಧಾರ್ಮಿಕ ವಿಧಿ ವಿಧಾನದಂತೆ ಅಂತ್ಯ ಸಂಸ್ಕಾರ ಮಾಡಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.



ಪಡುಬಿದ್ರಿ ನಿವಾಸಿ ವೇಣುಗೋಪಾಲ ರಾವ್ (62) ಮೃತ ವ್ಯಕ್ತಿ.
ವೇಣುಗೋಪಾಲ ರಾವ್ ಅವರು ಕಳೆದ ಎರಡು ವರುಷಗಳಿಂದ ಅನಾಥಾಶ್ರಮದಲ್ಲಿದ್ದರು. ಜುಲೈ 23 ರಂದು ರಾವ್ ಮೃತಪಟ್ಟಿದ್ದು, ಸಾವಿಗೂ ಮುನ್ನ ಮನೆಯವರನ್ನು ನೋಡುವುದಕ್ಕಾಗಿ ರಾವ್ ಪರಿತಪಿಸುತ್ತಿದ್ದರು. ಆದರೆ, ಇವರ ಸಾವಿನ ಸುದ್ದಿ ತಿಳಿದರೂ ಕೂಡಾ ಕೊರೊನಾ ಭಯದಿಂದ ಶವದ ಅಂತ್ಯ ಸಂಸ್ಕಾರ ಮಾಡಲು ಕುಟುಂಬಿಕರು ಹಿಂದೇಟು ಹಾಕಿದ್ದರು.
ವಾರಸುದಾರರಿದ್ದರೂ ಅನಾಥವಾಗಿ ಸಾವನ್ನಪ್ಪಿದ ವೃದ್ದರೋರ್ವರ ಅಂತ್ಯ ಸಂಸ್ಕಾರ ಮಾಡಲು ಕುಟುಂಬಿಕರು ಮುಂದೇ ಬಾರದೇ ಇದ್ದ ಕಾರಣ ಆ್ಯಂಬುಲೆನ್ಸ್ ಚಾಲಕ ಮೊಹಮ್ಮದ್ ಆಸಿಫ್ ಅವರು ಮುಲ್ಕಿ ಠಾಣಾ ಪೊಲೀಸರ ಅನುಮತಿ ಪಡೆದು ತಮ್ಮ ಸ್ನೇಹಿತರ ಜೊತೆಗೂಡಿ ಮುಲ್ಕಿಯ ಹಿಂದೂ ರುದ್ರಭೂಮಿಯಲ್ಲಿ ಹಿಂದೂ ಧಾರ್ಮಿಕ ವಿಧಿ ವಿಧಾನದಂತೆ ಅಂತಿಮ ಸಂಸ್ಕಾರ ನೆರವೇರಿಸಿದ್ದಾರೆ.
ಮೊಹಮ್ಮದ್ ಆಸಿಫ್ ಅವರು ಮಾನಸಿಕ ಖಿನ್ನತೆಗೊಳಗಾದವರಿಗೆ ಆಶ್ರಯ ನೀಡುತ್ತಿದ್ದು, ಇವರು ಮೈಮೂನಾ ಫೌಂಡೇಶನ್ನ ನಿರ್ದೇಶಕರೂ ಆಗಿದ್ದಾರೆ. ಆಸಿಫ್ ಅವರ ಮಾಡಿರುವ ಸಮಾಜ ಸೇವೆಗೆ, ಸಾಮಾಜಿಕ ಕಳಕಳಿಗೆ ವ್ಯಾಪಾಕವಾದ ಮೆಚ್ಚುಗೆ ವ್ಯಕ್ತವಾಗಿದೆ.