ಉಡುಪಿ, ಜು 24 (DaijiworldNews/PY): ಮಹಿಳೆಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡ ವೇಳೆ ಮುಂಜಾನೆ 3 ಗಂಟೆಯ ವೇಳೆ ಆಶಾ ಕಾರ್ಯಕರ್ತೆಯೊಬ್ಬರು ಸ್ವತಃ ಆಟೋ ಚಲಾಯಿಸಿ ಆಸ್ಪತ್ರೆಗೆ ದಾಖಲಿಸಿ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.



ರಾಜೀವಿ ಅವರಿಗೆ ಮಧ್ಯರಾತ್ರಿ 3.15ರ ಸುಮಾರಿಗೆ ಪೆರ್ಣಂಕಿಲದ ಶ್ರೀಲತಾ ಎಂಬವರು ಕರೆ ಮಾಡಿ ಹೆರಿಗೆ ನೋವು ಹೆಚ್ಚಾಗಿರುವ ವಿಷಯ ತಿಳಿಸಿದರು. ತಕ್ಷಣವೇ ರಾಜೀವಿ ಅವರು ತಮ್ಮ ಆಟೊ ರಿಕ್ಷಾ ಓಡಿಸಿ ಗರ್ಭಿಣಿಯನ್ನು ಪೆರ್ಣಂಕಿಲದಿಂದ 20 ಕಿ.ಮೀ ದೂರದಲ್ಲಿರುವ ಉಡುಪಿಯ ಸರ್ಕಾರಿ ಮಹಿಳಾ ಹಾಗೂ ಮಕ್ಕಳ ಆಸ್ಪತ್ರೆಗೆ ದಾಖಲಿಸಿದ್ದಾರೆ. ಶ್ರೀಲತಾ ಅವರು ಮಧ್ಯಾಹ್ಯ 12 ಗಂಟೆ ಸುಮಾರಿಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ತಾಯಿ ಹಾಗೂ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ರಾಜೀವಿ ಅವರು ತಿಳಿಸಿದ್ದಾರೆ.
ರಾಜೀವಿ ಅವರು ಸುಳ್ಯ ಮೂಲದವರಾಗಿದ್ದು, ವಿವಾಹವಾದ ಬಳಿಕ ಅವರು ಪೆರ್ಣಂಕಿಲದಲ್ಲಿ ವಾಸಿಸುತ್ತಿದ್ದಾರೆ. ಇವರು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಶ್ರೀ ಶಕ್ತಿ ಸ್ವಸಹಾಯ ಗುಂಪಿನ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ. ಇವರ ಬಳಿ ಎರಡು ಆಟೋ ರಿಕ್ಷಾಗಳಿದ್ದು, ಒಂದನ್ನು ಬಾಡಿಗೆಗೆ ನೀಡಲಾಗಿದ್ದು ಇನ್ನೊಂದು ಆಟೋವನ್ನು ಹೆರಿಗೆಗಾಗಿ ಆಸ್ಪತ್ರೆಗಳಿಗೆ ಭೇಟಿ ನೀಡುವ ಗರ್ಭಿಣಿಯರಿಗೆ ಉಚಿತ ಪ್ರಯಾಣ ಒದಗಿಸುತ್ತಿದ್ದಾರೆ. ಇದೀಗ ಇವರು ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಪೆರ್ಣಂಕಿಲ ಪ್ರದೇಶದಲ್ಲಿ ಕಡಿಮೆ ಬಸ್ ಸೇವೆ ಇರುವ ಕಾರಣ ಪೆರ್ಣಂಕಿಲ ಪ್ರದೇಶದ ಮಹಿಳೆಯರನ್ನು ಸುರಕ್ಷಿತವಾಗಿ ಮನೆಗಳಿಗೆ ತಲುಪಿಸುವಂತೆ ಮಾಡುತ್ತಿದ್ದಾರೆ.
ಐದು ವರ್ಷಗಳ ಹಿಂದೆ ಅನಾರೋಗ್ಯದ ಕಾರಣ ಪತಿ ಮೃತರಾದರು. ಮಗಳಿಗೆ ವಿವಾಹವಾಗಿದೆ. ಮಗ ಸಣ್ಣ ಕೆಲಸದಲ್ಲಿದ್ದಾನೆ. ಜೀವನ ನಿರ್ವಹಣೆಗಾಗಿ ಬೆಳಗ್ಗಿನಿಂದ ಮಧ್ಯಾಹ್ನ ತನಕ ಆಶಾ ಕಾರ್ಯಕರ್ತೆಯಾಗಿ ಕೆಲಸ ಮಾಡಿದರೆ, ರಾತ್ರಿವರೆಗೆ ಆಟೋ ಚಾಲಕಿಯಾಗಿ ದುಡಿಯುತ್ತಿದ್ದೇನೆ ಎಂದು ಹೇಳಿದ್ದಾರೆ.