ಕೋಟ, ಜು 24 (Daijiworld News/MSP): ಸಾಬರಕಟ್ಟೆ ಚೆಕ್ ಪೋಸ್ಟನಲ್ಲಿ ಶುಕ್ರವಾರ ಬೆಳಗಿನ ಜಾವ ಪರಿಶೀಲನೆಯ ಸಂದರ್ಭ ಹರಿಯಾಣದಿಂದ ಕೇರಳಕ್ಕೆ ಟ್ರಕ್ನಲ್ಲಿ 59 ಕೋಣಗಳನ್ನು ಹಿಂಸಾತ್ಮಕವಾಗಿ ಸಾಗಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿ ಕೋಣಗಳನ್ನು ಮತ್ತು ಚಾಲಕ ಸಹಿತ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ.



ಕೋಟ ಠಾಣೆಯ ಪ್ರೊಬೆಷನಲ್ ಎಸ್ಪಿ ಸಂತೋಷ್ ಸಿಬಂದಿಗಳ ಜೊತೆ ಬೆಳಗಿನ ಜಾವ 3 ಗಂಟೆಯ ಸುಮಾರಿಗೆ ಪರಿಶೀಲನೆ ನಡೆಸುತ್ತಿರುವ ಸಂದರ್ಭ ಕೋಣಗಳನ್ನು ತುಂಬಿಸಿಕೊಂಡಿದ್ದ ಟ್ರಕ್ ಆಗಮಿಸಿತ್ತು. ಟ್ರಕ್ನ್ನು ಪರಿಶೀಲಿಸಿದಾಗ ಬರೋಬ್ಬರಿ 59 ಕೋಣಗಳನ್ನು ಅತ್ಯಂತ ಹಿಂಸಾತ್ಮಕವಾಗಿ ತುಂಬಲಾಗಿತ್ತು. ಹರಿಯಾಣದಿಂದ ಕೇರಳದ ತನಕ ಹಿಂಸಾತ್ಮಕವಾಗಿ ತುಂಬಿಸಿಕೊಂಡು ಒಯ್ಯಲಾಗುತ್ತಿತ್ತು.
ರಕ್ಷಿಸಿರುವ ಕೋಣಗಳನ್ನು ನೀಲಾವರ ಗೋಶಾಲೆಗೆ ಬಿಡಲಾಗಿದೆ. ಬ್ರಹ್ಮಾವರ ವೃತ್ತ ನಿರೀಕ್ಷಕ ಅನಂತ ಪದ್ಮನಾಭ, ಕೋಟ ಠಾಣಾಧಿಕಾರಿ ಸಂತೋಷ್ ಬಿ.ಪ್ರಕರಣ ದಾಖಲಿಸಿಕೊಂಡಿದ್ದಾರೆ.