ಬೆಂಗಳೂರು, ಏ 17 : ನಟಿ ಅಮೂಲ್ಯ ತಮ್ಮ ಪತಿ ಜಗದೀಶ್ ಮತ್ತು ಮಾವ ರಾಮಚಂದ್ರ ಅವರೊಂದಿಗೆ ಮಂಗಳವಾರ ಜೆಡಿಎಸ್ ಪಕ್ಷ ಸೇರ್ಪಡೆಯಾಗಿದ್ದಾರೆ. ಮಂಗಳವಾರ ಜೆಡಿಎಸ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಸೇರಿದಂತೆ ಗಣ್ಯರ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಯಾದರು. ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಅಮೂಲ್ಯ ಅವರ ಮಾವ ರಾಮಚಂದ್ರ ಮಾತನಾಡಿ ಬಿಜೆಪಿ ಪಕ್ಷದಿಂದ ಅನ್ಯಾಯವಾಗಿದೆ ಎಂದು ನೊಂದು ಜೆಡಿಎಸ್ಗೆ ಸೇರಿದ್ದೇನೆ ಎಂದರು. ಕಮಲ ಪಾಳೆಯದಲ್ಲಿ ಗುರುತಿಸಿಕೊಂಡಿದ್ದ ರಾಮಚಂದ್ರ ಅವರು ರಾಜರಾಜೇಶ್ವರಿ ನಗರದಲ್ಲಿ ಸ್ಪರ್ಧಿಸುವ ಪ್ರಬಲ ಆಕಾಂಕ್ಷೆ ಹೊಂದಿದ್ದರು. ಸುಮಾರು ಎರಡು ದಶಕಗಳಿಂದ ಬಿಜೆಪಿಯಲ್ಲಿದ್ದ ಅವರು, ಯಡಿಯೂರಪ್ಪ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. ಅಲ್ಲದೆ ಟಿಕೆಟ್ ಸಿಗುವ ಎಂಬ ಭರವಸೆ ಹೊಂದಿದ್ದರು.
ಪಕ್ಷ ಸೇರ್ಪಡೆಗೊಂಡ ಬಳಿಕ ಮಾತನಾಡಿದ ನಟಿ ಅಮೂಲ್ಯ ನನಗೆ ರಾಜಕೀಯದ ಬಗ್ಗೆ ಅಷ್ಟೊಂದು ಗೊತ್ತಿಲ್ಲ, ನನ್ನ ಮಾವನಿಗೆ ಟಿಕೆಟ್ ಸಿಕ್ಕರೇ ಅವರ ಪರವಾಗಿ ಪ್ರಚಾರ ನಡೆಸುತ್ತೇನೆ. ಮೂರ್ನಾಲ್ಕು ವರ್ಷದ ನಂತರ ರಾಜಕೀಯಕ್ಕೆ ಬರುವ ಬಗ್ಗೆ ಚಿಂತನೆ ಮಾಡ್ತೀನಿ ಎಂದು ಹೇಳಿದ್ದಾರೆ
ಈ ಕಾರ್ಯಕ್ರಮದಲ್ಲಿ ಶಾಸಕ ಮಧು ಬಂಗಾರಪ್ಪ, ಪರಿಷತ್ ಸದಸ್ಯ ಶರವಣ, ಪಿ ಜಿ ಆರ್ ಸಿಂದ್ಯಾ, ಆರ್ ಪ್ರಕಾಶ್, ಶಾಸಕ ಗೋಪಾಲಯ್ಯ, ಲಗ್ಗೆರೆ ನಾರಾಯಣ ಸ್ವಾಮಿ ಉಪಸ್ಥಿತರಿದ್ದರು.