ಕುಂದಾಪುರ, ಜು 24 (Daijiworld News/MSP): ಲಾಕ್ಡೌನ್ ಹಾಗೂ ಕೊರೊನಾ ಸಾಂಕ್ರಮಿಕ ರೋಗದಿಂದ ವ್ಯಾಪಾರ ವಹಿವಾಟು ಎಲ್ಲಾ ಸ್ಥಗಿತಗೊಂಡು ಜನ ಸಾಮಾನ್ಯರ ಪರಿಸ್ಥಿತಿ ಹೇಳತೀರದಾಗಿದೆ. ಇಂತಹ ಸಂದರ್ಭದಲ್ಲಿ ಬೀದಿ ನಾಯಿಗಳ ಹಸಿವನ್ನು ತಣಿಸುತ್ತಿರುವವರು ಕುಂದಾಪುರದ ಹಂಗ್ಳೂರಿನ ಹುಡುಗಿ ಮೋನಿಶಾ ಗೇಬ್ರಿಯಲ್.




ಲಾಕ್ ಡೌನ್ ವೇಳೆ ಒಬ್ಬರು ಇನ್ನೊಬ್ಬರಿಗೆ ಹಲವಾರು ರೀತಿಯಲ್ಲಿ ಸಹಾಯ ಮಾಡಿದ್ದಾರೆ. ಆದರೆ ಲಾಕ್ ಡೌನ್ ನಿಂದ ಮೂಕ ಪ್ರಾಣಿಗಳಿಗೆ ಸಹಾಯ ಮಾಡುವವರು ಯಾರು?, ಅಲ್ಲಿ ಇಲ್ಲಿ ಅಡ್ಡಾಡುವ ಬೀದಿ ನಾಯಿಗಳಿಗೆ ಹೋಟೇಲ್ ಗಳು ಮುಚ್ಚಿ, ಆಹಾರಕ್ಕೆ ಸಂಕಟ ಪಡುತ್ತಿದ್ದು ಅವುಗಳು ಮೂಕ ರೋದನೆ ವ್ಯಕ್ತಪಡಿಸುತ್ತಿತ್ತು. ಅದರಲ್ಲೂ ಬೀದಿನಾಯಿಗಳು ಹಸಿವೆಯಲ್ಲೇ ಸಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು, ಈ ಪರಿಸ್ಥಿತಿ ನೋಡಲಾಗದೆ ಲಾಕ್ಡೌನ್ ಆರಂಭವಾದಾಗಿನಿಂದ ಕಳೆದ ಸುಮಾರು ೧೧೮ ದಿವಸದಿಂದ ನಿರಂತರವಾಗಿ ತಮ್ಮ ಸ್ಥಳೀಯ ಪ್ರದೇಶದಲ್ಲಿ ನಾಯಿಗೆ ರುಚಿಕರ ಹಾಗೂ ಶುದ್ದ ಆಹಾರವನ್ನು ನೀಡುತ್ತಾ ಬಂದಿದ್ದಾರೆ ಮೋನಿಶಾ. ಇವರ ಈ ಸೇವೆಗೆ ಅವರ ಸ್ನೇಹಿತ ಅರವಿಂದ್ ಫೆರ್ನಾಂಡಿಸ್ ಕೂಡ ಕೈ ಜೋಡಿಸಿದ್ದಾರೆ.
ಮೂಲತಃ ಕುಂದಾಪುರದವರಾದರೂ, ಇಂಗ್ಲೆಂಡಿನ ಲ್ಯಾಂಕಸ್ಟರ್ ಯುನಿವರ್ಸಿಟಿಯಲ್ಲಿ ವಕೀಲ ಪದವಿ ಪಡೆದಿದ್ದಾರೆ, ಮುಂದೆ ತಮ್ಮ ಊರಲ್ಲಿ ಹೊಸ ಉದ್ಯಮ ಪ್ರಾರಂಭ ಮಾಡುವ ಯೋಚನೆ ಇದೆ. ಅಲ್ಲದೆ ಮುಂದಿನ ವರ್ಷ ಮಾರ್ಚನಲ್ಲಿ ಸಾದು ಪ್ರಾಣಿಗಳ ರಕ್ಷಣೆಗಾಗಿ ಒಂದು ಎನ್ಜಿಓ ಆರಂಭಿಸಬೇಕು, ಬೀದಿ ನಾಯಿಗಳನ್ನು ರಕ್ಷಣೆ ಮಾಡಲು ಸ್ಥಳಿಯ ಜಾಗದಲ್ಲಿ ಒಂದು ಆರೈಕೆ ಮಾಡುವ (ಶೇಡ್) ವ್ಯವಸ್ಥೆ ಮಾಡಬೇಕು ಎನ್ನುವ ಮಹಾದಾಸೆ ಇವರದ್ದು .
ಪ್ರತಿದಿನ ಬೆಳಗ್ಗೆ ಏಳು ಗಂಟೆಯಿಂದಲೇ ಪ್ರಾಣಿಗೆ ಅನ್ನ ಬೇಯಿಸುವ ಕೆಲಸ ಪ್ರಾರಂಭ ಮಾಡುತ್ತಾರೆ. ಮೊನಿಶಾ ಅವರ ತಂದೆ-ತಾಯಿಯೂ ಕೂಡ ಸಹಕಾರ ಕೊಡುತ್ತಾರಂತೆ. ಪ್ರತಿದಿನ ಬೇರೆ ಬೇರೆ ಆಹಾರ ಪದಾರ್ಥದೊಂದಿಗೆ, ಕೋಳಿ ಮಾಂಸ ವನ್ನು ಆಹಾರವಾಗಿ ಬೀದಿ ನಾಯಿಗಳಿಗೆ ನೀಡಲಾಗುತ್ತದೆ. ನಾಯಿಗಳಿಗೆ ಬಡಿಸಲು ಹೊಸ ತಟ್ಟೆಗಳನ್ನು ಖರೀದಿಸಿ, ಊಟ ಆದಮೇಲೆ ಮನೆಗೆ ತಂದು ತಾವೇ ಶುಚಿಗೊಳಿಸುತ್ತಾರೆ. . ಪ್ರತಿದಿನ ಬೀದಿ ನಾಯಿಗಳಿಗಾಗಿಯೇ ೧೫ ಕಿಲೋದಷ್ಟು ಅನ್ನ ಬೇಯಿಸುತ್ತಾರೆ. ಬಳಿಕ ಮಧ್ಯಾಹ್ನ ೨.೩೦ - ೪.೩೦ವರೆಗೆ ಈ ಕೆಲಸದಲ್ಲಿ ಬೀದಿನಾಯಿಗಳಿಗೆ ಆಹಾರ ನೀಡುವ ಕೆಲಸದಲ್ಲಿ ತೊಡಗುತ್ತಾರೆ.
ಮಳೆ ಬಂದಾಗ ತಮ್ಮ ಕಾರನ್ನು ಇದಕ್ಕಾಗಿ ಬಳಸಿ ಬೀದಿನಾಯಿಗಳಿಗೆ ಆಹಾರ ಕೊರತೆಯಾಗದಂತೆ ನೋಡಿಕೊಳ್ಳುತ್ತಾರೆ. ಇವರ ಸೇವೆಯನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಿದ ಕೆಲವರು ಅಕ್ಕಿ, ಹಾಲು, ಆಹಾರ ಪದಾರ್ಥ ಬಿಸ್ಕತ್ತು ನೀಡಿ ಸಹಾಯ ಮಾಡಿದ್ದುಂಟು.
"ಲಾಕ್ ಡೌನ್ ಎಲ್ಲರಗೂ ಜೀವನ ಪಾಠವನ್ನು ಕಲಿಸಿವೆ. ನನ್ನ ಕೆಲಸಕ್ಕೆ ತನ್ನ ಪೋಷಕರು ಉತ್ತಮವಾಗಿ ಬೆಂಬಲ ಕೊಡುತ್ತಿದ್ದಾರೆ. ಪ್ರಾಮಾಣಿಕತೆಯಲ್ಲಿ ಮನುಷ್ಯರಿಗಿಂತ ಪ್ರಾಣಿಗಳು ಬಹುಪಾಲು ಮೇಲು. ಇದಕ್ಕೆ ಸಾಕ್ಷಿ ಈಗ ಅನ್ನ ನೀಡುತ್ತಿರುವ ಶ್ವಾನಗಳು. ನಾನು ಕಂಡಲ್ಲಿ ಓಡಿ ಬಂದು ಮುದ್ದಾಡುತ್ತವೆ ಹಾಗೆ ಸಹಾಯವನ್ನು ಎಂದೂ ಮರೆಯುವುದಿಲ್ಲ,ನನಗೆ ಈ ಕಾರ್ಯದಲ್ಲಿ ತೃಪ್ತಿ ಸಿಗುತ್ತದೆ" ಎನ್ನುತ್ತಾರೆ ಮೋನಿಶಾ.
ತಾವು ಪ್ರಾರಂಭ ಮಾಡುವ ಎನ್ಜಿಒಗೆ ಆದ್ಯಾ (ಆದಿ ಮತ್ತು ಅಂತ್ಯ ಅಲ್ಲದೆ ದುರ್ಗ ಎನ್ನುವ ಅರ್ಥವೂ ಬರುತ್ತದೆ) ಎನ್ನುವ ಹೆಸರಿನ್ನಿಡುವ ಇರಾದೆ ಇದೆ ಎನ್ನುವ ಇವರು ಭಗವದ್ಗೀತೆಯ ಸಾಲುಗಳಿಂದ ಸ್ಪೂರ್ತಿಗೊಂಡು ಪುಸ್ತಕವನ್ನು ಕೂಡ ಬರೆಯುತ್ತಿದ್ದಾರೆ.